September 10, 2025

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ ಉದ್ಘಾಟನೆ:

ಸುದ್ದಿ ಮಾಡುವುದಷ್ಟೇ ಪತ್ರಕರ್ತರ ಜವಾಬ್ದಾರಿಯಲ್ಲ, ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು: ಶಾಸಕ ಸುನಿಲ್ ಕುಮಾರ್

ಕಾರ್ಕಳ, ಸೆ. 07: ಸುದ್ದಿ ಮಾಡುವುದಷ್ಟೇ ಪತ್ರಕರ್ತರ ಜವಾಬ್ದಾರಿಯಾಗಬಾರದು, ಇದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು. ಅವರು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನದ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ,ಸಾಮಾಜಿಕ ಬದ್ದತೆ ಹಾಗೂ ಜವಾಬ್ದಾರಿಯ ಜತೆಗೆ ಸುದ್ದಿಗೆ ಮಹತ್ವ ಕೊಟ್ಟು ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಹೊಣೆಗಾರಿಕೆ ಪತ್ರಕರ್ತರು ನಿಭಾಯಿಸಬೇಕೆಂದು ಕಿವಿಮಾತು ಹೇಳಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಅದ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನೂತನ ಪತ್ರಿಕಾ ಭವನವನ್ನು ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಸಮಾಜದ ಕಣ್ಣಿದ್ದಂತೆ,ಸಮಾಜದ ಆಗುಹೋಗುಗಳ ಸ್ಪಂದಿಸುವ ಪತ್ರಕರ್ತರಿಗೆ ಸ್ವಂತ ಕಟ್ಟಡದ ಅವಶ್ಯಕತೆಯಿದ್ದು,ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕಾದ ಅಗತ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ತಹಸೀಲ್ದಾರ್ ಪ್ರದೀಪ್ ಕುಮಾರ್,ಆರ್, ರವೀಂದ್ರ ಶೆಟ್ಟಿ ಬಜಗೋಳಿ,ಬೋಳ ಪ್ರಶಾಂತ್ ಕಾಮತ್, ಉದ್ಯಮಿ ಮೊಹಮ್ಮದ್ ಗೌಸ್,ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಮೋಹನ್ ಶೆಟ್ಟಿ, ವಾರ್ತಾಧಿಕಾರಿ ಮಂಜುನಾಥ್, ರಾಜ್ಯ ಸಮಿತಿ ಕಿರಣ್ ಮಂಜನಬೈಲು ಉಪಸ್ಥಿತರಿದ್ದರು.
ಉದಯ ಮುಂಡ್ಕೂರು ಸ್ವಾಗತಿಸಿ, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಹರೀಶ್ ಸಚ್ಚರಿಪೇಟೆ ವಂದಿಸಿದರು. ಕೃಷ್ಣ ಅಜೆಕಾರು ಹಾಗೂ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ನಾಗೇಶ್ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು.
ವರದಿ : ಅರುಣ ಭಟ್ ಕಾರ್ಕಳ

About The Author

error: Content is protected !!