March 1, 2026

ಶಿಕ್ಷಕರಿಗೆ ಗೌರವ ವಂದನೆ

ಸುಜಾತ-ರಾಜ-ರಾಜೇಂದ್ರ- ಚಂಪಾಭಿವಂದನೆ
ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚಿಗಷ್ಟೇ ವಯೋನಿವೃತ್ತಿಗೊಂಡ ಸಂಸ್ಕೃತ ಶಿಕ್ಷಕರನ್ನು ಹಾಗೂ ಬರ್ಗಿ ಪ್ರೌಢ ಶಾಲೆಯಿಂದ ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕರನ್ನು ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾ ಪೀಠದಿಂದ ಗೌರವಿಸಲಾಯಿತು.


ಹೊನ್ನಾವರದ ಹಡಿನಬಾಳದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರಿಸುಮಾರು ಎರಡುವರೆ ದಶಕಗಳಷ್ಟು ದೀರ್ಘಕಾಲಿಕವಾಗಿ ಸೇವೆಯನ್ನು ಸಲ್ಲಿಸಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅಪಾರ ಒಲವಿಗೆ ಪಾತ್ರರಾಗಿದ್ದ ಸುಜಾತ ದೇವರಬಾವಿಯವರು ಕಳೆದ ಜೂನ್ ತಿಂಗಳಲ್ಲಿ ನಿವೃತ್ತಿಗೊಂಡ ಸಂಸ್ಕೃತ ಶಿಕ್ಷಕರು.
ಕುಮಟಾದ ಮಿರ್ಜಾನ್ – ಕೊಡಕಣಿಯ ರಾಜು ನಾಯ್ಕರವರು ಹಿಂದಿ ವಿಷಯದ ಶಿಕ್ಷಕರಾದರೂ, ಸಂಸ್ಕೃತವನ್ನು ಕಲಿಯುತ್ತಲೇ ಕಳಿಸುತ್ತ ಸಂಸ್ಕೃತಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಕ್ರಿಯಾಶೀಲ ಶಿಕ್ಷಕರಾಗಿ ನಾಡಿನ ಗಮನ ಸೆಳೆದ ರಾಜ್ಯ ಪ್ರಶಸ್ತಿಗೆ ಭಾಜನರಾದವರು. ಕಳೆದ ಡಿಸೆಂಬರ್ ದಲ್ಲಿ ಸೇವಾ ನಿವೃತ್ತಿಗೊಂಡರೂ, ವಿದ್ಯಾರ್ಥಿಗಳಿಗಾಗಿ ಶಾಲಾ ಪಾಠ ಬೋಧನೆಯಲ್ಲಿ ಪ್ರವೃತ್ತವಾಗಿದ್ದವರು.
ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ರಾಜೇಂದ್ರ ಕೇಣಿಯವರು ಬರ್ಗಿ ಪ್ರೌಢ ಶಾಲೆಯಿಂದ ವರ್ಗಾವಣೆಗೊಂಡು ನಿವೃತ್ತರಾದರೂ, ಬರ್ಗಿಯ ಹಾಗೂ ಸಂಸ್ಕೃತದ ಕುರಿತು ನಂಟನ್ನು ಹೊಂದಿದವರು. ವರ್ಗಾವಣೆಗೊಂಡಿರುವ ಬರ್ಗಿ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಚಂಪಾವತಿ ನಾಯ್ಕರವರು ಸಹ ಸಂಸ್ಕೃತದ ಕುರಿತು ವಿಶೇಷವಾದ ಅಭಿಮಾನವನ್ನು ತಳೆದವರು.ಈ ಹಿನ್ನಲೆಯಲ್ಲಿ ಈ ನಾಲ್ವರನ್ನು ಸಂಸ್ಕೃತ ಕಾರ್ಯಾಗಾರದಲ್ಲಿ ಗೌರವಿಸಿರುವುದು ಸಕಾಲಿಕವೆಂದು ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಬರ್ಗಿಯವರು ನುಡಿದರು.


ಕುಮಟಾದ ಡಯಟ್ ನಿಂದ ಕರ್ನಾಟಕ ಸಂಸ್ಕೃತ ಪರಿಷತ್ ಹಾಗೂ ರಾಮಕೃಷ್ಣ – ವಿವೇಕಾನಂದ ಭಾವ ಪ್ರಚಾರ ಪರಿಷತ್ ನ ಉತ್ತರ ಕನ್ನಡ ಜಿಲ್ಲಾ ಘಟಕ – ಇವುಗಳ ಸಹಯೋಗದಲ್ಲಿ ಆಯೋಜಿಸಿದ ” ಯಶೋಮುಖಿ ” – ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಸಂಸ್ಕೃತ ವಿಷಯ ಶಿಕ್ಷಕರ ಇಲಾಖಾ ಕಾರ್ಯಾಗಾರದಲ್ಲಿ ಹಮ್ಮಿಕೊಂಡ ಈ ಸನ್ಮಾನದ ಸು-ವೇಳೆಯಲ್ಲಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ವಿ. ಎಸ್. ನಾಯಕ ಕಣಗಿಲ್, ಪ್ರಾಚಾರ್ಯರಾದ ಎನ್. ಆರ್. ಹೆಗಡೆ, ವಿಶ್ವ ನಾಡವರ ಪ್ರತಿಷ್ಠಾನದ ವಿಶ್ವಾಧ್ಯಕ್ಷರಾದ ಕುಂದಾಪುರದ ಕೋಟೇಶ್ವರದ ಉಪನ್ಯಾಸಕರಾಗಿರುವ ಹರೀಶ್ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯ ನಾಯ್ಕ, ಸದಭಿರುಚಿಯ ಕೆ.ಆರ್. ನಾಯಕ್, ಹಿರಿಯ ಉಪನ್ಯಾಸಕರಾದ ಚಂದ್ರಹಾಸ ರಾಯ್ಕರ್ ಹಾಗೂ ವಿದ್ಯಾರ್ಥಿ ಪಾಲಕರಾದ ವಿದ್ಯಾಭಿಮಾನಿ ನಾರಾಯಣ ನಾಗು ನಾಯಕ್ ಮೊದಲಾದವರಿದ್ದರು.

About The Author

error: Content is protected !!