ಭಟ್ಕಳ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಯಶಸ್ವೀಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ ಕಲೆ ಮತ್ತು ಕಲಾವಿದರನ್ನು ಗೌರವಿಸುವುದರಿಂದ ಸಮಾಜ ಸಾಂಸ್ಕೃತಿಕವಾಗಿ ತನ್ನ ವೈಭವವನ್ನು ಹೆಚ್ಚಿಸಿಕೊಳ್ಳುತ್ತದೆ ಎಂದರು. ಮುರುಡೇಶ್ವರದ ಸಾಂಸ್ಕೃತಿಕ ರಾಯಭಾರಿ ಐ.ಆರ್. ಭಟ್ಟ ಅವರನ್ನು ಸನ್ಮಾನಿಸಿ ಗೌರವಿಸಿದ ರಾಗಶ್ರೀ ಸಂಗೀತ ವಿದ್ಯಾಲಯದ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಪುಷ್ಪಲತಾ ವೈದ್ಯ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲೂ ಉಲ್ಲಾಸ, ಉತ್ಸಾಹ ಮತ್ತು ಸಾಂಸ್ಕೃತಿಕ ಮನಸ್ಸನ್ನು ಹೆಚ್ಚಿಸಿಕೊಳ್ಳಲು ಸಂಗೀತದ ಆಸ್ವಾದನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ಜೀವನದ ಒತ್ತಡವನ್ನು ಶಮನಗೊಳಿಸಲು ಕಲೆಯನ್ನು ಅವಲಂಬಿಸಿದರೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮುರುಡೇಶ್ವರದಲ್ಲಿ ಯಕ್ಷರಕ್ಷೆಯನ್ನು ಸ್ಥಾಪಿಸಿ ಸಂಗೀತ, ನೃತ್ಯ ಮತ್ತು ಯಕ್ಷಗಾನದ ಎಲ್ಲಾ ಪ್ರಾಕಾರಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟ ಕಲಾಪೋಷಕ ಡಾ. ಐ.ಆರ್.ಭಟ್ಟ ಅವರಿಗೆ ರಾಗಶ್ರೀಯ “ಕಲಾಸೇವಾಶ್ರೀ” ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಐ.ಆರ್. ಭಟ್ಟ ಕಲೆಯ ರಹಸ್ಯವನ್ನು ಅರಿತ ನಾನು ಮುರುಡೇಶ್ವರದಲ್ಲಿ ಯಕ್ಷರಕ್ಷೆಯನ್ನು ಸ್ಥಾಪಿಸಿ ಕಲೆಯನ್ನು ಪೋಷಿಸಿದ್ದೇನೆ. ಇಂದು ನನಗೆ ನೀಡಿದ ಪ್ರಶಸ್ತಿಯಿಂದ ಧನ್ಯತೆಯನ್ನು ಪಡೆದಿದ್ದೇನೆ. ಊರಿನ ಮಕ್ಕಳು ಸಾಂಸ್ಕೃತಿಕವಾಗಿ ಬೆಳೆದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ವಿದ್ವಾಂಸ ಶಂಭು ಭಟ್ಟ ಕಡತೋಕ, ಭಟ್ಕಳ ಅರ್ಬನ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಂಭು ಹೆಗಡೆ, ಎಲ್.ಎಂ.ಹೆಗಡೆ, ಎಸ್. ಜಿ. ಭಟ್ಟ, ಮುರ್ಡೇಶ್ವರ ಪಿಎಸ್‌ಐ ಹಣಮಂತ ಬೀರಾದಾರ ಮಾತನಾಡಿದರು.
ರಾಗಶ್ರೀ ಸಂಗೀತ ವಿದ್ಯಾಲಯದ ಅಧ್ಯಕ್ಷ ಶಿವಾನಂದ ಭಟ್ಟ ಹಡಿನಬಾಳ ಸ್ವಾಗತಿಸಿದರು. ಕು. ಬಿಂದು ಅವಧಾನಿ ನಿರೂಪಿಸಿದರು. ಕಾರ್ಯದರ್ಶಿ ಎನ್.ಜಿ. ಹೆಗಡೆ ಕೆಪ್ಪಕೆರೆ ವಂದಿಸಿದರು. ಸಭಾ ಕಾರ್ಯಕ್ರಮದ ಪೂರ್ವ ರಾಗಶ್ರೀ ಸಂಗೀತ ವಿದ್ಯಾಲಯ ಮುರುಡೇಶ್ವರ ಶಾಖೆಯ ವಿದ್ಯಾರ್ಥಿಗಳಿಂದ ವಾದನ, ಸಂಗೀತ ಮತ್ತು ಭಜನ್ ನಡೆಯಿತು. ನಂತರ ರಾಗಶ್ರೀ ವಿದ್ಯಾಲಯದ ಶಿಕ್ಷಕಿ ಕುಮಾರಿ ರಂಜಿತಾ ನಾಯ್ಕ ಇವರಿಂದ ಹಿಂದುಸ್ತಾನಿ ಗಾಯನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

More Stories
ಮುರುಡೇಶ್ವರ ಪಾಲಿಟೆಕ್ನಿಕ್ ನಲ್ಲಿ ಒಂದು ದಿನದ ಇನ್ಕುಬೇಷನ್ ಜಾಗೃತಿ ಕಾರ್ಯಕ್ರಮ
ಮುರ್ಡೇಶ್ವರದಲ್ಲಿ ಲಾಡ್ಜ್ ಮೇಲೆ ಪೊಲೀಸ್ ದಾಳಿ: ಇಬ್ಬರು ಮಹಿಳೆಯರ ರಕ್ಷಣೆ, ರೂಮ್ ಬಾಯ್ ಬಂಧನ
ಮುರುಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ಸಾವಿರಾರು ಭಕ್ತರ ದಂಡು – ಕಳೆದುಕೊಂಡವರನ್ನು ಪತ್ತೆ ಹಚ್ಚಿದ ಪೊಲೀಸರು