ಶಿರಸಿ :ಪ್ರತಿಯೊಬ್ಬರೂ ಧರ್ಮಾಚರಣೆಯೊಂದಿಗೆ ಕರ್ಮ ಮಾಡಬೇಕೆಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.
ನಗರದ ಯೋಗ ಮಂದಿರದಲ್ಲಿ ಶನಿವಾರ ನಡೆದ 29ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನುಡಿದರು.
ಮನೆಯಲ್ಲಿ ಮನೆಧರ್ಮ, ರಾಷ್ಟ್ರದಲ್ಲಿ ರಾಷ್ಟ್ರಧರ್ಮ ಹಾಗೂ ಸಮಾಜದಲ್ಲಿ ಸಮಾಜಧರ್ಮದ ಮೂಲಕ ಕರ್ಮ ನಡೆಯಬೇಕು ಎಂದು ತಿಳಿಸಿದ ಶ್ರೀಗಳು, ಸಂತ ಪರಂಪರೆಯ ಮೂಲ ಗಂಗೋತ್ರಿ ಶಂಕರ ಭಗವತ್ಪಾದರು ಎಂದರು. ಯೋಗ ಮಂದಿರದಲ್ಲಿ ಪ್ರತಿಷ್ಠಾಪನೆಯಾದ ಬಳಿಕ ಅನೇಕ ರೋಮಾಂಚಕಾರಿ ಅನುಭವಗಳು ಸಂಭವಿಸುತ್ತಿವೆ ಎಂದು ಹೇಳಿದರು.
ಶಂಕರ ಭಗವತ್ಪಾದರಿಗೆ ಇಡೀ ಜಗತ್ತಿನಲ್ಲಿ ಮಹತ್ತರ ಸ್ಥಾನವಿದ್ದು, ಅವರ ಸಮನ್ವಯ ಸಿದ್ಧಾಂತ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು. ಎಲ್ಲ ದೇವರ ಜೊತೆಗೆ ಇಷ್ಟ ದೇವರ ಆರಾಧನೆ ಮಾಡಬೇಕು. ಇಷ್ಟ ದೇವರ ಉಪಾಸನೆಯಿಂದ ಅಂತಿಮವಾಗಿ ಆನಂದ ಲಭಿಸುತ್ತದೆ ಎಂದು ಶ್ರೀಗಳು ತಿಳಿಸಿದರು.
ಸಮತ್ವದ ಚಿಂತನೆಗಾಗಿ ದೇವರ ಸೇವೆ, ಪೂಜೆ ಅಗತ್ಯ. ಸಂಧ್ಯಾವಂದನೆ, ದೇವರಪೂಜೆ, ಯೋಗಾಸನ, ಪ್ರಾಣಾಯಾಮ, ಸ್ತೋತ್ರ ಪಠಣ ಹಾಗೂ ಭಗವಂತನ ಧ್ಯಾನವನ್ನು ಪ್ರತಿದಿನ ಬೆಳಿಗ್ಗೆ ಕಡ್ಡಾಯವಾಗಿ ಮಾಡಬೇಕು ಎಂದು ಸಲಹೆ ನೀಡಿದರು. ಮನೆಮನೆಗಳ ವಾತಾವರಣ ಬದಲಾಗಿದರೆ ಸಮಾಜದಲ್ಲೂ ಸಕಾರಾತ್ಮಕ ಬದಲಾವಣೆ ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಸಿದ್ಧ ನೇತ್ರ ತಜ್ಞ ಹಾಗೂ ವೈದ್ಯ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕೆ.ವಿ., ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರಕಿದ್ದು ಶ್ರೀಗಳ ಆಶೀರ್ವಾದದ ಫಲ ಎಂದರು.
ಹರಿದಾಸ ರತ್ನ ನಾರಾಯಣ ದಾಸ ಮಾತನಾಡಿ, ಗುರುಗಳ ಕೃಪೆಯಿಂದ ಎಲ್ಲವೂ ಸಾಧ್ಯ. ಸಮಾಜದ ಋಣ ತೀರಿಸಲು ಭಗವಂತನ ನಾಮಸ್ಮರಣೆ ಅಗತ್ಯವೆಂದರು.
ಸಮಾಜ ಇಂದು ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ವಿವಾಹ ವಿಚಾರದಲ್ಲಿ ಸಂಕಷ್ಟ ಎದುರಾಗುತ್ತಿದೆ. ಯುವಕ-ಯುವತಿಯರು ವಿವಾಹಕ್ಕೆ ಮುಂದಾಗದಿರುವುದು ಸಮಾಜದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ವಿಫಲತೆಯೇ ಸಮಸ್ಯೆಗೆ ಕಾರಣವಾಗಿದ್ದು, ಸರಿಯಾದ ವಯಸ್ಸಿಗೆ ವಿವಾಹವಾದರೆ ಸಮಾಜ ಭದ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜೀವನದಲ್ಲಿ ಯೋಗ ಮತ್ತು ಸಮತ್ವದ ಚಿಂತನೆ ಇದ್ದರೆ ಯಶಸ್ಸು ಸಾಧ್ಯ. ಇಲ್ಲದಿದ್ದರೆ ಉದ್ವೇಗ ಹಾಗೂ ದುರ್ಘಟನೆಗಳಿಗೆ ಒಳಗಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಕೇಂದ್ರ ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ, ತೃಯಂಬಕ ಹೆಗಡೆ, ದಾಮೋದರ ಭಟ್ಟ, ಸುನಂದಾ ಭಟ್ಟ, ಮಾಧುರಿ ಶಿವರಾಮ, ಭಾರತಿ ನಾರಾಯಣದಾಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಜರಾಜೇಶ್ವರಿ ವಿದ್ಯಾಲಯದ ವಿದ್ಯಾರ್ಥಿಗಳು ವೇದಘೋಷ ನೆರವೇರಿಸಿದರು. ಹೇಮಾ ಹೆಗಡೆ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು. ಯೋಗ ಮಂದಿರದ ಅಧ್ಯಕ್ಷ ಎಸ್.ಎನ್. ಭಟ್ ಉಪಾಧ್ಯ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಎಸ್. ಹೆಗಡೆ ವರದಿ ವಾಚಿಸಿದರು. ಅನಿತಾ ಶ್ರೀಕಾಂತ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸ್ನೇಹಾ ಶರ್ಮಾ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಬೇಡ್ತಿ–ಅಘನಾಶಿನಿ ಯೋಜನೆ ಜಾರಿಯಾದಲ್ಲಿ ಉತ್ತರ ಕನ್ನಡ ಜಿಲ್ಲೆ ಅಪೂರ್ವ ದುಸ್ಥಿತಿಗೆ ಒಳಗಾಗಲಿದೆ. ಬೇರೆ ಜಿಲ್ಲೆಗಳ ಬರಗಾಲ ನಿವಾರಣೆಗೆ ಉತ್ತರ ಕನ್ನಡದ ಮೇಲೆ ಬರದ ಭಾರ ಬೀಳುವ ಸಾಧ್ಯತೆ ಇದೆ. ಜಿಲ್ಲೆಯ ಉಳಿವಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಸ್ವರ್ಣವಲ್ಲೀ ಶ್ರೀಗಳು ಎಚ್ಚರಿಸಿದರು.

More Stories
ಜಾತ್ರಾ ಸಮಯದಲ್ಲಿ ಹೋಟೆಲ್ ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಸಕರಿಂದ ಸೂಚನೆ.
ಸಪ್ತಕದ 20 ವರ್ಷಗಳ ಸಾರ್ಥಕ ಪಯಣದ 950ನೇ ವಿಶೇಷ ಕಾರ್ಯಕ್ರಮ ಫೆ 28 ರಂದು ನವದೆಹಲಿಯಲ್ಲಿ
ಭಕ್ತಾದಿಗಳಿಗೆ ತಂಪು ಪಾನೀಯ ಕರ್ನಾಟಕ ರಕ್ಷಣಾ ವೇದಿಕೆಯಿಂದ