March 1, 2026

ಎಸ್.ಎಸ್.ಕೆ.ಪಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಹಾರ ಮೇಳ

ಹೊನ್ನಾವರ: ವಿದ್ಯಾರ್ಥಿಗಳಿಗೆ ಹಣಕಾಸು ನಿರ್ವಹಣೆ, ಮತ್ತು ಮಾರಾಟ ಕೌಶಲ್ಯಗಳನ್ನು ಕಲಿಸುವ ಉದ್ದೇಶದಿಂದ ಎಸ್.ಎಸ್.ಕೆ.ಪಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಹಾರ ಮೇಳ ಆಯೋಜಿಸಲಾಗಿತ್ತು.

ಮಕ್ಕಳಲ್ಲಿ ಆಹಾರದ ಮಹತ್ವ ತಿಳಿಸಲು, ಬಳಕೆಯಲ್ಲಿರುವ ವಿಭಿನ್ನ ಸಂಸ್ಕೃತಿಯ ಆಹಾರ ಪರಿಚಯಿಸಿ ಅಭಿರುಚಿ ಬೆಳೆಸಲು, ಆಹಾರ ತಯಾರಿಕೆಯಲ್ಲಿ ಆಸಕ್ತಿ ರೂಪಿಸುದು, ವ್ಯವಹಾರಿಕ ಜ್ಞಾನ ಮೂಡಿಸುವುದು ಆಹಾರ ಮೇಳದ ಉದ್ದೇಶವಾಗಿತ್ತು.

ಶಾಲೆಯ ಮಕ್ಕಳು ಕಬ್ಬಿನ ಹಾಲು, ಮಸಾಲ ಮಜ್ಜಿಗೆ, ವಿವಿಧ ಬಗೆಯ ಹಣ್ಣುಗಳು, ತರಕಾರಿಗಳು, ಸಿಹಿ ತಿನಿಸುಗಳು ವಿವಿಧ ರುಚಿಯ ಚಾಟ್ಸ್, ಸ್ನಾಕ್ಸ್ ಮತ್ತಿತರ ಆರೋಗ್ಯಕರ ತಿಂಡಿಗಳನ್ನು ಮೇಳದಲ್ಲಿ ಆಕರ್ಷಕವಾಗಿ ಪ್ರದರ್ಶಿಸಿ, ಮಾರಾಟ ಮಾಡಿ ಗಮನ ಸೆಳೆದರು. ತಮ್ಮ ಮಕ್ಕಳು ಸಿದ್ದಪಡಿಸಿದ ಆಹಾರವನ್ನು ಮುಗಿಬಿದ್ದು ಖರೀದಿಸಿದ ಪೋಷಕರು, ಸವಿದು ಸಂಭ್ರಮಿಸಿದರು.


ಶಾಲಾ ಮುಖ್ಯ ಶಿಕ್ಷಕಿ ಶೈಲಾ ಹೆಗಡೆ ಮಾತನಾಡಿ ಮಕ್ಕಳು ತಮ್ಮ ಅಭಿರುಚಿಯ ಆಹಾರವನ್ನು ಇತರರಿಗೂ ಪರಿಚಯಿಸಲು, ಮಕ್ಕಳಲ್ಲಿ ಆಹಾರ ತಯಾರಿಕೆ ಬಗ್ಗೆ ಆಸಕ್ತಿ ಮೂಡಿಸಲು ಈ ಮೇಳ ಸಹಕಾರಿಯಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಸಿದರೆ ಅವರಲ್ಲಿ ಕ್ರಿಯಾಶೀಲತೆ ಹೆಚ್ಚಲಿದೆ.ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿರುವ ಆಹಾರ ಪದಾರ್ಥಕ್ಕೆ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅವರ ವ್ಯವಹಾರ ಕೌಶಲ್ಯ, ಆಹಾರ ಕ್ರಮದ ಬಗ್ಗೆ ಅರಿವು ಮೂಡಲಿದೆ ಎಂದರು.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!