March 1, 2026

ಸಪ್ತಕದ 20 ವರ್ಷಗಳ ಸಾರ್ಥಕ ಪಯಣದ 950ನೇ ವಿಶೇಷ ಕಾರ್ಯಕ್ರಮ ಫೆ 28 ರಂದು ನವದೆಹಲಿಯಲ್ಲಿ

ಶಿರಸಿ: ದೆಹಲಿ ಕರ್ನಾಟಕ ಸಂಘ ದ ಆಶ್ರಯದಲ್ಲಿ ಸಾಂಸ್ಕೃತಿಕ ಸಂಸ್ಥೆ ಸಪ್ತಕದ 20 ವರ್ಷಗಳ ಸಾರ್ಥಕ ಪಯಣದ ಅಂಗವಾಗಿ 950ನೇ ವಿಶೇಷ ಕಾರ್ಯಕ್ರಮವು ಫೆ 28 ರಂದು ನವದೆಹಲಿಯ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಯೋಜಿತವಾಗಿದೆ.


ಬೆಂಗಳೂರಿನ ಖ್ಯಾತ ಸಾಂಸ್ಕೃತಿಕ ಸಂಸ್ಥೆಯಾದ ‘ಸಪ್ತಕ’ವನ್ನು 2006 ರಲ್ಲಿ ಜಿ. ಎಸ್. ಹೆಗಡೆ, ಗೀತಾ ಹೆಗಡೆ ಸೇರಿ ಸ್ಥಾಪಿಸಿದರು. ಕಳೆದ ಎರಡು ದಶಕಗಳಿಂದ ಶಾಸ್ತ್ರೀಯ ಸಂಗೀತ, ನೃತ್ಯ, ನಾಟಕ ಮತ್ತು ಯಕ್ಷಗಾನದಂತಹ ಕಲೆಗಳನ್ನು ಪ್ರೋತ್ಸಾಹಿಸುವಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ.
ಜಿ. ಎಸ್. ಹೆಗಡೆ ಅವರು ಕರ್ನಾಟಕ ಬ್ಯಾಂಕ್‌ನಲ್ಲಿ 40 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದವರು. ವೃತ್ತಿಯ ಜೊತೆಜೊತೆಗೇ ಪ್ರವೃತ್ತಿಯಾಗಿ ಸಂಗೀತ ಮತ್ತು ಕಲೆಯ ಮೇಲಿನ ಪ್ರೀತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ತಾವು ಕೆಲಸ ಮಾಡಿದ ಕಡೆಗಳಲ್ಲೆಲ್ಲಾ ಕಲೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಶ್ರಮಿಸಿರುವುದು ಇವರ ವೈಶಿಷ್ಟ್ಯ. ‘ಸಪ್ತಕ’ದ ಮೂಲಕ ಕಲಾಸಕ್ತರಿಗೆ ಉಚಿತ ಪ್ರವೇಶ ನೀಡಿ ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುವುದು ಇವರ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ.


ಈ ವಿಶೇಷ ಸಮಾರಂಭದಲ್ಲಿ ಸಪ್ತಕದ ಟ್ರಸ್ಟಿ ಜಿ. ಎಸ್. ಹೆಗಡೆ ಅವರಿಗೆ ಗೌರವಪೂರ್ವಕ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅತಿಥಿಗಳಾಗಿ ಭಾರತೀಯ ರೈಲ್ವೆಯ ಜಂಟಿ ನಿರ್ದೇಶಕರಾದ ಅನೀಶ್ ಹೆಗಡೆ ದೆಹಲಿ,ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜ್, ಮಾಜಿ ಅಧ್ಯಕ್ಷ ಡಾ. ವೆಂಕಟಾಚಲ ಜಿ. ಹೆಗಡೆ ಹಾಗೂ ಕರ್ನಾಟಕ ಬ್ಯಾಂಕ್‌ನ ಡಿಜಿಎಂ ಬಸವರಾಜ ದೇಶಹಳ್ಳಿ ಪಾಲ್ಗೊಳ್ಳಲಿದ್ದಾರೆ.


ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮುಂಬೈನ ಪ್ರಸಿದ್ಧ ಗಾಯಕ ಧನಂಜಯ್ ಹೆಗಡೆ ಅವರಿಂದ ಗಾಯನ, ಬೆಂಗಳೂರಿನ ಶ ರೂಪಕ್ ಕಲ್ಲೂರ್ಕರ್ ಅವರಿಂದ ತಬಲಾ ಮತ್ತು ನವದೆಹಲಿಯ ಲಲಿತ್ ಸಿಸೋಡಿಯಾ ಅವರಿಂದ ಹಾರ್ಮೋನಿಯಂ ವಾದನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಬ್ಯಾಂಕ್ ಪ್ರಾಯೋಜಕತ್ವ ನೀಡಿದೆ.


ಇನ್ನು ಜಿ. ಎಸ್. ಹೆಗಡೆ ಅವರು ಕೇವಲ ಕಲೆಯಷ್ಟೇ ಅಲ್ಲದೆ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ದಾನ, ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ನೆರವು ನೀಡುವಂತಹ ಮಾನವೀಯ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗುಣವಂತೆಯವರಾದ ಇವರು, ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿ ದೇಶದಾದ್ಯಂತ ಕನ್ನಡದ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಸಪ್ತಕದ ಈ 950ನೇ ಕಾರ್ಯಕ್ರಮವು ಒಬ್ಬ ನಿಷ್ಠಾವಂತ ಕಲಾ ಸಂಘಟಕನ ಪರಿಶ್ರಮ ಮತ್ತು ಸಂಸ್ಥೆಯ ಸಾಧನೆಯ ದ್ಯೋತಕವಾಗಿದೆ.

_____________________________________
ನನ್ನ ಸಾಧನೆಯ ಹಾದಿಯಲ್ಲಿ ,
ಇದೇ ಸಮಾಜದ ಅನುದಾನ
ಸಿಕ್ಕಿದಾಗ ಪಡುವ ಆತ್ಮ ತೃಪ್ತಿಯೇ ಸಮಾಧಾನ
ಅನುಭವಿಸುತ್ತಿರುವದೇ ನನಗೆ ಅದುವೆ
ಅಮೃತ ಸಮಾನ, ಸನ್ಮಾನ
ಜಿ.ಎಸ್.ಹೆಗಡೆ, ಸಪ್ತಕ.                            ______________________________________

ವರದಿ : ರಾಘವೇಂದ್ರ ಬೆಟ್ಟಕೊಪ್ಪಾ, ಶಿರಸಿ

About The Author

error: Content is protected !!