April 16, 2026

ದಿ. ಡಿ. ದೇವರಾಜ ಅರಸು ವಿಚಾರ ವೇದಿಕೆಯಿಂದ ಪತ್ರಿಕಾಗೋಷ್ಠಿ

ಹೊನ್ನಾವರ:  ಜಿಲ್ಲೆಯ ಗ್ರಾಮೀಣ ಪ್ರದೇಶದ ತುಂಡು ಭೂಮಿಯಲ್ಲಿ ಜನಸಾಮಾನ್ಯರು ಮನೆ ಕಟ್ಟಿಕೊಳ್ಳಲು ತೊಡಕಾಗಿರುವಂತಹ  ಎನ್.ಎ ಮತ್ತು ಇಸ್ವತ್ತು ಕೈಬಿಡುವಂತೆ  ಆಗ್ರಹಿಸಿ  ಜಿಲ್ಲಾ ದಿ. ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಒತ್ತಾಯಿಸಿದರು.

ಪಟ್ಟಣದ ನಾಮಧಾರಿ ವಿದ್ಯಾರ್ಥಿ ನಿಲಯದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ಶೇಕಡಾ 80% ಭೂ ಪ್ರದೇಶ ಅರಣ್ಯ ಭೂಮಿಯಾಗಿರುವ ಜೊತೆ, ಹೆಚ್ಚಿನದು ತುಂಡು ಭೂಮಿಯ ರೈತರಿಂದಲೇ ಗುಡ್ಡಗಾಡು ಜಿಲ್ಲೆಯಾಗಿದೆ. ರಾಜ್ಯದ ಇತರೇ ಎಲ್ಲಾ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆ ಭೌಗೋಳಿಕವಾಗಿ ಸಂಪೂರ್ಣ ಭಿನ್ನವಾಗಿದ್ದು, ಸಾಕಷ್ಟು ಹಳ್ಳಿಗಳು ರಸ್ತೆಯನ್ನೇ ಕಂಡಿಲ್ಲ. ರಸ್ತೆಗಳಿದ್ದರೂ ಬಡವರ, ಜನಸಾಮಾನ್ಯರ ತುಂಡು ಭೂಮಿಗೆ ಹೊಂದಿಕೊಂಡಿರುವುದಿಲ್ಲ. ಹೀಗಿರುವಾಗ ಜನಸಾಮಾನ್ಯರ ಪಾಲಿಗೆ ಎನ್.ಎ ಮತ್ತು ಇಸ್ವತ್ತು ಬಿಡಿಸಲಾಗದ ಕಗ್ಗಂಟಾಗಿದೆ. ಆದ್ದರಿಂದ ಬಡವರು, ತುಂಡು ಭೂಮಿ ರೈತರು ಮನೆ ನಿರ್ಮಿಸಿಕೊಳ್ಳುವಲ್ಲಿ ತೊಡಕಾಗುವುದರಿಂದ ಮುಕ್ತಿ ನೀಡಬೇಕೆಂದು ಸಾರ್ವಜನಿಕವಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ, ವಸತಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ನೀಡಲಾಗುವುದೆಂದು  ತಿಳಿಸಿದರು.

ಕಳೆದ 7-8 ವರ್ಷಗಳಿಂದ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಆಶ್ರಯ ಯೋಜನೆ ಅಡಿಯಲ್ಲಿ ಮನೆಗಳನ್ನು ಮಂಜೂರಿ ನೀಡಿಲ್ಲ. ಸರ್ಕಾರದ ಇನ್ನಿತರ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರಿ ಪಡೆದುಕೊಂಡರೆ ಎನ್.ಎ ಮತ್ತು ಇಸ್ವತ್ತಿನ ಸಮಸ್ಯೆಗಳೇ ಇಲ್ಲ. ಈ ಮನೆಗಳಿಗೆ ಗ್ರಾಮ ಪಂಚಾಯತದಿಂದ ಮನೆ ನಂಬರ ನೀಡಿ, ಕರ ನಿರ್ಧರಣೆ ನಿರ್ಧರಿಸಲಾಗುತ್ತದೆ. ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಜನಸಾಮಾನ್ಯರು ಎಷ್ಟರಮಟ್ಟಿಗೆ ಮನೆ ಮಂಜೂರಿ ಪಡೆಯಲು ಸಾಧ್ಯ. ಈ ಅವಕಾಶಕ್ಕಾಗಿ ಕಾಯುವುದು ಎಷ್ಟು ಸಮಂಜಸ ಮತ್ತು ಆ ಯೋಜನೆ ಅಡಿಯಲ್ಲಿ ಕಾಲಾವಕಾಶ ಒದಗಿ ಬರುವುದು ಯಾವಾಗ? ಇತ್ತೀಚಿನ ಜನಸಾಮಾನ್ಯರು ಬಡವರು ಮನೆಕಟ್ಟಿಕೊಂಡು ಬದುಕುವುದಾದರೂ ಹೇಗೆ? ಸರ್ಕಾರದ ವಸತಿ ಯೋಜನೆಗಳಿಗಾಗಿ ಕಾಯುವುದು ಸರಿಯಲ್ಲ, ಜಿಲ್ಲೆಯ ಪರಿಸ್ಥಿತಿಯನ್ನು ಅರಿತು ಬಡವರಿಗೆ, ಜನಸಾಮಾನ್ಯರಿಗೆ ಗ್ರಾಮೀಣ ಪ್ರದೇಶದಲ್ಲಿ ಮನೆಕಟ್ಟಿಸಿಕೊಳ್ಳಲು ತೊಡಕಾಗಿರುವ ಎನ್.ಎ ಮತ್ತು ಇಸ್ವತ್ತುಗಳಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದರು.

ಸದಸ್ಯ  ಶಂಕರ ಗೌಡ ಗುಣವಂತೆ  ಮಾತನಾಡಿ  ನಮ್ಮ ಜಿಲ್ಲೆಯ ರೈತರು ಸೌಲಭ್ಯ ಪಡೆದುಕೊಂಡಿರುದಕ್ಕಿಂತ, ಕಳೆದುಕೊಂಡಿರುವುದು ಹೆಚ್ಚು. ಆಳುವ ಸರ್ಕಾರಕ್ಕೆ ಸರ್ಕಾರದ ತಲೆಯಲ್ಲಿ ಮೆದುಳಿಲ್ಲ, ವೈಚಾರಿಕತೆಯೂ  ಇಲ್ಲ. ಜನಸಾಮನ್ಯರಿಗೆ ಸೌಲಭ್ಯ ನೀಡುದಕ್ಕಿಂತ ನಂಬಿಸಿ ಕುತ್ತಿಗೆ ಕೊಯ್ಯುವ ಕೆಲಸ ಆಳುವ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಸದಸ್ಯರಾದ ನಾರಾಯಣ ಮುಕ್ರಿ ಕಡತೋಕಾ, ಕೇಶವ ನಾಯ್ಕ ಮಾಗೋಡ, ದೀಪಕ ಲೋಬೋ ಕೋಡಾಣಿ ಉಪಸ್ಥಿತರಿದ್ದರು.

ವರದಿ: ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!