ಭಟ್ಕಳ: ಹಿಂದೂ ಸಮಾಜ ಒಗ್ಗಟ್ಟಾಗಿ ನಿಂತರೆ ಜಗತ್ತು ಗೌರವಿಸುವಂತ ಶಕ್ತಿ ಹೊಂದಿದೆ ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ನಗರದ ಹಳೆ ಬಸ್ ನಿಲ್ದಾಣದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಾಂಗಣದಲ್ಲಿ ಆಯೋಜಿಸಲಾದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಕೆಲವರಿಂದ ಆರಂಭವಾದ ಸಂಘಟನೆ ಇಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದ್ದು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು. ಯೋಗ, ಆಯುರ್ವೇದ ಸೇರಿದಂತೆ ಭಾರತದ ಪರಂಪರೆಗಳು ಇಂದು ಜಗತ್ತಿನಾದ್ಯಂತ ಸ್ವೀಕೃತಿ ಪಡೆಯುತ್ತಿರುವುದು ದೇಶದ ಸಂಸ್ಕೃತಿಯ ಮಹತ್ವವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ನಾವು ಹಿಂದುಳಿದವರು ಎಂಬ ಮನೋಭಾವವು ಗುಲಾಮಿ ಮನಸ್ಥಿತಿಯ ಪರಿಣಾಮವಾಗಿದ್ದು, ಅದನ್ನು ತೊರೆದು ಆತ್ಮವಿಶ್ವಾಸದಿಂದ ಮುಂದುವರಿಯಬೇಕೆಂದು ಹೇಳಿದರು.
ಆರ್‌ಎಸ್‌ಎಸ್ ಕುರಿತು ಕೆಲವರು ಟೀಕೆ ಮಾಡುತ್ತಿದ್ದರೂ ಅದನ್ನು ಎದುರಿಸಲು ಯಾರಿಗೂ ಧೈರ್ಯವಿಲ್ಲ ಎಂದು ಅವರು ಹೇಳಿದರು. ಹಿಂದೂ ಸಮಾಜದೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ನಡೆಯುವುದು ಅಗತ್ಯವಾಗಿದೆ ಎಂದರು. ಸಮಾಜದಲ್ಲಿ ಪರಸ್ಪರ ಮತ್ಸರ ತೊರೆದು ಎಲ್ಲರ ಒಳಿತನ್ನು ಬಯಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಆಶೀರ್ವಚನ ನೀಡಿದ ಮೋಹನದಾಸ ಪರಮಹಂಸ ಸ್ವಾಮೀಜಿ, ಹಿಂದೂ ಎಂಬ ಪದಕ್ಕೂ ಭಗವಧ್ವಜಕ್ಕೂ ಅಪಾರ ಶಕ್ತಿ ಇದೆ ಎಂದು ಹೇಳಿದರು. ಪರಕೀಯರು ಶತಮಾನಗಳ ಕಾಲ ದೇಶವನ್ನು ಲೂಟಿ ಮಾಡಿದರೂ ಹಿಂದೂ ಸಂಸ್ಕೃತಿ ಮತ್ತು ರಾಷ್ಟ್ರದ ಅಸ್ತಿತ್ವವನ್ನು ನಾಶಪಡಿಸಲು ಸಾಧ್ಯವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಭಾರತೀಯ ಸಂಸ್ಕೃತಿ ವಿಶ್ವದಾದ್ಯಂತ ತನ್ನ ಪ್ರಭಾವವನ್ನು ಮೂಡಿಸಿದ್ದು, ಸ್ವಾಮಿ ವಿವೇಕಾನಂದರಂತಹ ಮಹಾನ್ ಚಿಂತಕರು ಭಾರತದ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
ಸಮಾಜದಲ್ಲಿ ವಿಕೃತಿಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಮ್ಮ ದೌರ್ಬಲ್ಯಗಳನ್ನು ತೊರೆದು ಒಂದಾಗುವುದು ಅಗತ್ಯವಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಉಂಟಾಗಿರುವ ಅಸ್ವಸ್ಥತೆ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡುವ ಕೆಲಸ ನಡೆಯಬೇಕು ಎಂದು ಹೇಳಿದರು. ಹಿಂದೂ ಧರ್ಮವು ಎಲ್ಲರ ಒಳಿತನ್ನು ಬಯಸುವ ಧರ್ಮವಾಗಿದ್ದು ಸಮಾಜದಲ್ಲಿ ಸಾಮರಸ್ಯ ಹಾಗೂ ಮೌಲ್ಯಗಳನ್ನು ಉಳಿಸುವ ಕೆಲಸ ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು. ವಿವಿಧ ಟ್ಯಾಬ್ಲುಗಳು, ಮಹಿಳೆಯರ ಭಜನಾ ತಂಡಗಳು, ಪೂರ್ಣಕುಂಭ ಸ್ವಾಗತ ಹಾಗೂ ಪುಟಾಣಿ ಮಕ್ಕಳ ವಿವಿಧ ವೇಷಭೂಷಣಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಶೋಭಾಯಾತ್ರೆಯನ್ನು ಸ್ಥಳೀಯರು ಉತ್ಸಾಹದಿಂದ ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಶ್ರೀಧರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪವಿತ್ರಾ ನಾಯ್ಕ ಗೀತೆ ಹಾಡಿದರು. ಶಿಕ್ಷಕ ನಾರಾಯಣ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ಪೂಜಾರಿ ವಂದಿಸಿದರು.

More Stories
ಜಯ ಕರ್ನಾಟಕ ಸಂಘಟನೆಯಿಂದ ಕೆ.ಆರ್. ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ,
ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಪರ್ತಗಾಳಿ ಮಠಕ್ಕೆ ಭೇಟಿ
ಬಿಹಾರದಿಂದ ಪರ್ತಗಾಳಿಗೆ, ನಾಯಕತ್ವದಿಂದ ಭಕ್ತಿಗೆ, ಸಾರ್ಧ ಪಂಚಶತಮಾನೋತ್ಸವಕ್ಕೆ ಮೈಥಿಲಿ ಠಾಕೂರ್