ಭಟ್ಕಳ: ತೋಟಗಾರಿಕೆ ಇಲಾಖೆಯ ವತಿಯಿಂದ 2026–27ನೇ ಸಾಲಿನಲ್ಲಿ ಸಿದ್ಧಾಪುರ ತಾಲೂಕಿನ ಹೊಸೂರು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿರುವ 10 ತಿಂಗಳ ತೋಟಗಾರಿಕೆ ತರಬೇತಿಗೆ ಉತ್ತರ ಕನ್ನಡ ಜಿಲ್ಲೆಯ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೇ 2, 2026 ರಿಂದ ಫೆಬ್ರವರಿ 28, 2027 ರವರೆಗೆ ತರಬೇತಿ ನಡೆಯಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. ಜೊತೆಗೆ ಅಭ್ಯರ್ಥಿ ಅಥವಾ ಅವರ ತಂದೆ–ತಾಯಿ/ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಈ ಬಗ್ಗೆ ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರ ಸಲ್ಲಿಸಬೇಕಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 18 ರಿಂದ 33 ವರ್ಷ ಹಾಗೂ ಇತರೆ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷ ವಯೋಮಿತಿ ನಿಗದಿಯಾಗಿದೆ. ತರಬೇತಿಗೆ ಆಯ್ಕೆಯಾದವರಿಗೆ ತರಬೇತಿ ಕೇಂದ್ರದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ಒದಗಿಸಲಾಗುತ್ತದೆ.
ಅರ್ಜಿ ನಮೂನೆಗಳನ್ನು ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ, ಶಿರಸಿ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ರಾ.ವ) ಕಚೇರಿ, ಕಾರವಾರದಲ್ಲಿ ಪಡೆಯಬಹುದು. ಅಲ್ಲದೆ ಇಲಾಖೆಯ ವೆಬ್ಸೈಟ್ horticulturedir.karnataka.gov.in ನಲ್ಲಿಯೂ ಲಭ್ಯವಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 15, 2026ರ ಸಂಜೆ 5.30ರೊಳಗೆ ಸಂಬಂಧಿತ ಕಚೇರಿಗಳಿಗೆ ಸಲ್ಲಿಸಬೇಕು. ಅಭ್ಯರ್ಥಿಗಳ ಸಂದರ್ಶನ ಏಪ್ರಿಲ್ 23ರಂದು ಶಿರಸಿಯ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ. ಆಯ್ಕೆಪಟ್ಟಿಯನ್ನು ಏಪ್ರಿಲ್ 27ರಂದು ಪ್ರಕಟಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 9113932603, 7483078879, 8971956318 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಭಟ್ಕಳ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More Stories
ಎಲ್ಪಿಜಿ ದುರ್ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಭಟ್ಕಳದಲ್ಲಿ ಹೋಟೆಲ್ಗಳ ತಪಾಸಣೆ
ರೈಲಿನಿಂದ ಬಿದ್ದು ವೃದ್ಧನ ದಾರುಣ ಸಾವು
ಭಟ್ಕಳ ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆ