ಭಟ್ಕಳ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಎದುರಾದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದೆ. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ದುರ್ಬಳಕೆ ತಡೆಗಟ್ಟಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು, ಇದರ ಭಾಗವಾಗಿ ಭಟ್ಕಳದಲ್ಲೂ ಹೋಟೆಲ್‌ಗಳ ತಪಾಸಣೆ ಆರಂಭಿಸಲಾಗಿದೆ.
ಇರಾನ್ ಮೇಲೆ ಅಮೆರಿಕಾ–ಇಸ್ರೇಲ್ ಜಂಟಿ ದಾಳಿ ಹಾಗೂ ಅದಕ್ಕೆ ಇರಾನ್ ಪ್ರತಿಕಾರದ ಕ್ರಮದಿಂದ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಭಾರತಕ್ಕೆ ಕಚ್ಚಾ ತೈಲ ಸಾಗಾಟದ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಸ್ಥಿರತೆಯಿಂದ ತೈಲ ಹಾಗೂ ಅನಿಲ ಪೂರೈಕೆಗೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ಗಳನ್ನು ಗೃಹ ಬಳಕೆದಾರರಿಗೆ ಆದ್ಯತೆಯಾಗಿ ವಿತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಅವರು ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನಿಸಿದ್ದಾರೆ.
ಸೂಚನೆ ಅನ್ವಯ ವಿವಿಧ ತಾಲೂಕುಗಳ ತಹಸೀಲ್ದಾರರು ಕಾರ್ಯಾಚರಣೆ ಆರಂಭಿಸಿದ್ದು, ಭಟ್ಕಳದಲ್ಲಿ ಹೋಟೆಲ್ ಅಡುಗೆ ಕೋಣೆಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಡುಗೆ ಅನಿಲದ ದುರ್ಬಳಕೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೋಟೆಲ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಶಾಲೆ, ಅಂಗನವಾಡಿ ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಅಡುಗೆ ಅನಿಲ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಭಟ್ಕಳ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ತಿಳಿಸಿದ್ದಾರೆ.

More Stories
ಭಟ್ಕಳದಲ್ಲಿ ಮನೆ ಕಳ್ಳತನ: 5.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೆ
ಮುರ್ಡೇಶ್ವರದಲ್ಲಿ ಭೀಕರ ರಸ್ತೆ ಅಪಘಾತ: ಮಾಜಿ ಸೈನಿಕ ಸಾವು, ಮೂವರಿಗೆ ಗಾಯ
ಭಟ್ಕಳ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡಕ್ಕೆ ಮೇ 14ರಂದು ಶಿಲಾನ್ಯಾಸ