March 29, 2026

ನೈಜ ಇಸ್ಲಾಂ ಬೋಧನೆಗಳ ಪಾಲನೆಗೆ ಕರೆ: ಭಟ್ಕಳದಲ್ಲಿ ಈದ್ ಸಂದೇಶ

ಭಟ್ಕಳ: ಇಸ್ಲಾಂ ಧರ್ಮವು ಕೇವಲ ಆಚರಣೆಗಳಿಗೆ ಸೀಮಿತವಲ್ಲ; ಅದು ಮಾನವೀಯತೆ, ನೈತಿಕತೆ ಮತ್ತು ಶಾಂತಿಯ ಮಾರ್ಗವಾಗಿದ್ದು, ಪ್ರತಿಯೊಬ್ಬ ಮುಸ್ಲಿಂ ತನ್ನ ನಡತೆ ಮತ್ತು ಚಾರಿತ್ರ್ಯದ ಮೂಲಕ ಧರ್ಮದ ಸತ್ಯತೆಯನ್ನು ಸಮಾಜಕ್ಕೆ ತೋರಿಸಬೇಕು ಎಂದು ಮರ್ಕಝಿ ಖಲೀಫಾ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಗ್ವಾಜಾ ಮುಈನುದ್ದೀನ್ ಅಕ್ರಮಿ ಮದನಿ ನದ್ವಿ ಕರೆ ನೀಡಿದರು.

ನಗರದ ಬಂದರ್‌ ರಸ್ತೆಯ ಈದ್ದಾ ಮೈದಾನದಲ್ಲಿ ಶುಕ್ರವಾರ ನಡೆದ ಸಾಮೂಹಿಕ ಪ್ರಾರ್ಥನೆಯ ನಂತರ ಅವರು ಈದ್ ಸಂದೇಶ ನೀಡಿದರು.

ಧಾರ್ಮಿಕ ಮಾರ್ಗದಲ್ಲಿ ನಡೆಯುವುದೇ ಶ್ರೇಷ್ಠ ಜೀವನವೆಂದು ತಿಳಿಸಿದ ಅವರು, ನಮಾಜ್, ರೋಜಾ, ಝಕಾತ್ ಮತ್ತು ಹಜ್ ಸೇರಿದಂತೆ ಧಾರ್ಮಿಕ ಕರ್ತವ್ಯಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು. ಧಾರ್ಮಿಕ ವಿಚಾರಗಳಿಗೆ ಸಾಮಾಜಿಕ ಜಾಲತಾಣಗಳ ಬದಲು ಉಲೇಮಾಗಳನ್ನು ಸಂಪರ್ಕಿಸಿ ಸರಿಯಾದ ಮಾರ್ಗದರ್ಶನ ಪಡೆಯುವಂತೆ ಸಲಹೆ ನೀಡಿದರು.

ಕುಟುಂಬವೇ ಸಮಾಜದ ಅಡಿಪಾಯವಾಗಿದ್ದು ಪೋಷಕರೊಂದಿಗೆ ಮೃದುವಾಗಿ ನಡೆದುಕೊಳ್ಳುವುದು ಮಹತ್ತರ ಇಬಾದತ್ ಎಂದು ಹೇಳಿದರು. ದಂಪತಿಗಳ ಪರಸ್ಪರ ಹಕ್ಕು-ಹಾವ್ಯಗಳನ್ನು ಗೌರವಿಸುವುದು ಕುಟುಂಬ ಶಾಂತಿಗೆ ಅವಶ್ಯಕವೆಂದು ತಿಳಿಸಿದರು.
ಮಾದಕ ವಸ್ತುಗಳು ಸಮಾಜಕ್ಕೆ ಮಾರಕವಾಗಿದ್ದು, ಯುವಜನತೆ ಇವುಗಳಿಂದ ದೂರವಿರಬೇಕು ಎಂದು ಖಾಝಿ ಎಚ್ಚರಿಸಿದರು. ಅನ್ಯರ ಸೊತ್ತನ್ನು ಕಬಳಿಸುವುದು ಮತ್ತು ಪಡೆದ ಸಾಲವನ್ನು ಮರಳಿಸದೇ ಇರುವುದು ಇಸ್ಲಾಂ ಬೋಧನೆಗಳಿಗೆ ವಿರುದ್ಧವೆಂದು ಹೇಳಿದರು.

ದೇಶದಲ್ಲಿ ಸಹಬಾಳ್ವೆ ಮತ್ತು ಸೌಹಾರ್ದತೆ ಕಾಪಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು.ತಮ್ಮ ನಡವಳಿಕೆಯ ಮೂಲಕವೇ ಇಸ್ಲಾಂನ ಶಾಂತಿ ಸಂದೇಶವನ್ನು ಸಮಾಜಕ್ಕೆ ತಲುಪಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಹಬ್ಬದ ಪ್ರಾರ್ಥನೆಗೆ ಅಗತ್ಯ ಸೌಲಭ್ಯ ಹಾಗೂ ಭದ್ರತೆ ಒದಗಿಸಿದ ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

About The Author

error: Content is protected !!