ಭಟ್ಕಳ :ನಾಗಮಾಸ್ತಿ ಯೋಗ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಿದ ಯುಗಾದಿ ಕವಿಗೋಷ್ಠಿ ಮತ್ತು ಉಪನ್ಯಾಸ ಅತ್ಯಂತ ವಿಶಿಷ್ಟ ಎಂದು ನಾಗಮಾಸ್ತಿ ಕ್ಷೇತ್ರದ ಅಧ್ಯಕ್ಷ ಸತೀಶಕುಮಾರ್ ನಾಯ್ಕ ನುಡಿದರು.
ಅವರು ಇಲ್ಲಿನ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ನಾಗಮಾಸ್ತಿ ಯೋಗ ಕೇಂದ್ರ ಹಾಗೂ ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ಯುಗಾದಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯುಗಾದಿ ಹಬ್ಬದ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತು ಯುಗಾದಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೇ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳು, ಶಿಕ್ಷಕ ಸಮೂಹ ಮತ್ತು ಸಾಮಾನ್ಯ ಜನರನ್ನೂ ತಲುಪುವ ನಿಟ್ಟಿನಲ್ಲಿ
ಶಾಲಾ ಕಾಲೇಜುಗಳಲ್ಲಿ, ಹಬ್ಬ ಹರಿದಿನ ಉತ್ಸವಗಳ ಸಂದರ್ಭಗಳಲ್ಲಿ, ಸಾಹಿತ್ಯಕ ಕಾರ್ಯಕ್ರಮಗಳನ್ನು ಪರಿಷತ್ತಿನ ಅಧ್ಯಕ್ಷರಾದ ಗಂಗಾಧರ ನಾಯ್ಕ ಮತ್ತು ಅವರ ಬಳಗದ ನೇತೃತ್ವದಲ್ಲಿ ಸಂಘಟಿಸುತ್ತ ಬಂದಿದ್ದು ಭಟ್ಕಳ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತು ಎಲ್ಲರನ್ನು ತಲುಪುವoತಾಗಿದೆ ಮಾತ್ರವಲ್ಲ ಜಿಲ್ಲೆಯಲ್ಲಿಯೇ ಗುರುತಿಸಲ್ಪಡುವ ಘಟಕವಾಗಿದೆ. ಇದು ಪರಿಷತ್ತಿನ ಆಜೀವ ಸದಸ್ಯರಾದ ತಮಗೆ ಮಾತ್ರವಲ್ಲ ಭಟ್ಕಳ ತಾಲ್ಲೂಕಿಗೆ ಹೆಮ್ಮೆ ಎಂದರು.




ಈ ಸಂದರ್ಭದಲ್ಲಿ ನಾಗಮಾಸ್ತಿ ಕ್ಷೇತ್ರದಲ್ಲಿ ನಡೆಯುವ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಕ್ರಮಗಳ ಕುರಿತು ತಿಳಿಸಿದರಲ್ಲದೆ ಯೋಗ ಕೇಂದ್ರವನ್ನು ನಡೆಸಿಕೊಂಡು ಬರುವಲ್ಲಿ ಗೋವಿಂದ ಗುರೂಜಿ, ಮತ್ತು ಲತಾ ನಾಯ್ಕ ಹಾಗೂ ಊರ ತಾಯಂದಿರ ಸಹಕಾರವನ್ನು ನೆನೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಯುಗಾದಿಯ ಸಂದರ್ಭದಲ್ಲಿ ಸುತ್ತಲ ಪ್ರಕೃತಿಯ ಗಿಡಮರಗಳಲ್ಲಿ ಹೊಸ ಚಿಗುರು ಮೂಡಿಬಂದು, ಹೊಸತನ ತುಂಬಿಕೊಳ್ಳುತ್ತದೆ. ಯುಗಾದಿಯು ಹಬ್ಬ ಪ್ರಕೃತಿಯನ್ನು ಅನುಸರಿಸಿ ಹೊಸವರ್ಷಾಚರಣೆಗೆ ಕರೆ ಕೊಡುವ ಹಬ್ಬವಾಗಿದೆ.ಇಂಥ ಕಾರ್ಯಕ್ರಮಗಳ ಮೂಲಕ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಹಬ್ಬ ಮತ್ತು ಆಚರಣೆಗಳ ಹಿಂದಿನ ವೈಚಾರಿಕ ಹಿನ್ನೆಲೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬಹುದಲ್ಲದೆ ನಮ್ಮನ್ನು ಸಂಸ್ಕರಿಸಿಕೊಳ್ಳಲು ಪೂರಕವಾಗುತ್ತದೆ.ಪ್ರಕೃತಿಯನ್ನು ಅನುಸರಿಸಿದಾಗ ನಮ್ಮ ಬದುಕು ಹಸನಾಗುತ್ತದೆ, ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಕನ್ನಡ ಮನಸುಗಳ ಸಹಕಾರದಿಂದ ನಿರಂತರ ಕಾರ್ಯಕ್ರಮಗಳನ್ನು ಸಂಘಟಿಸಿ ಎಲ್ಲರನ್ನು ತಲುಪಲು ಸಾಧ್ಯವಾಗಿದೆ ಎಂದು ನುಡಿದರಲ್ಲದೇ ನಾಗಮಾಸ್ತಿ ಕ್ಷೇತ್ರವು ಆಧ್ಯಾತ್ಮಿಕ ಉನ್ನತಿಯ ಜೊತೆಗೆ ವೈಚಾರಿಕ ಚಿಂತನೆಗಳನ್ನು ದಾಟಿಸುವ, ಸಂಸ್ಕಾರ ಮೂಡಿಸುವ ಮತ್ತು ವ್ಯಕ್ತಿತ್ವ ವಿಕಸನದ ಕೇಂದ್ರವಾಗಿರುವುದು ವಿಶೇಷ ಎಂದರು.







ಈ ಸಂದರ್ಭದಲ್ಲಿ ಶಿಕ್ಷಕ ಸುರೇಶ ಮುರ್ಡೇಶ್ವರ ಯುಗಾದಿ ಹಬ್ಬದ ವಿಶೇಷತೆಯ ಕುರಿತು ವಿಶೇಷ ಉಪನ್ಯಾಸ ನೀಡಿ ಯುಗಾದಿಯು ನಿಜವಾದ ಅರ್ಥದಲ್ಲಿ ಹೊಸವರ್ಷದ ಸಂಭ್ರಮಾಚಾರಣೆಯ ಸಂದರ್ಭ ಎಂದರಲ್ಲದೆ ಅರವತ್ತು ಸಂವತ್ಸರಗಳ ಮತ್ತು ದ್ವಾದಶ ಮಾಸಗಳ ಹೆಸರುಗಳನ್ನು ಮಕ್ಕಳಿಗೆ ಕಂಠಸ್ಥ ಮಾಡಿಸಿದಲ್ಲಿ ಮಕ್ಕಳಲ್ಲಿ ಬರೆಹ ಮತ್ತು ಉಚ್ಚಾರ ಶುದ್ಧತೆ ಮೂಡಿಸಬಹುದು ಎಂದರು. ಕವಿಗಳಾದ ಮಾನಸುತ ಶಂಭು ಹೆಗಡೆ, ಶ್ರೀಧರ್ ಶೇಟ್ ಶಿರಾಲಿ, ಪೂರ್ಣಿಮಾ ಕರ್ಕಿಕರ್,ಜಯಶ್ರೀ ಆಚಾರ್ಯ, ರಾಘವೇಂದ್ರ ಮಡಿವಾಳ, ಪ್ರತಿಭಾ ಕರ್ಕಿಕರ್ ಸ್ವರಚಿತ ಕವನ ವಾಚಿಸಿ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ನಾಗಮಾಸ್ತಿ ಯೋಗಕೇಂದ್ರ ಆರಂಭಗೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಯೋಗಗುರು ಗೋವಿಂದ ದೇವಾಡಿಗ ಹಾಗೂ ಯೋಗ ಶಿಕ್ಷಕಿ ಲತಾ ನಾಗರಾಜ ನಾಯಕ ಅವರನ್ನು ಸನ್ಮಾನಿಸಲಾಯಿತು. ಈ ಸದರ್ಭದಲ್ಲಿ ನಾಗಮಾಸ್ತಿ ಯೋಗ ಕೇಂದ್ರದ ಕುರಿತು ಹೇಮಾವತಿ ನಾಯ್ಕ ಮತ್ತು ರೇಖಾ ನಾಯ್ಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಾಗಮಾಸ್ತಿ ಯೋಗ ಕೇಂದ್ರದ ನಾಗರಾಜ ನಾಯ್ಕ ಎಲ್ಲರನ್ನ ಸ್ವಾಗತಿಸಿದರೆ ರೇಖಾ ಲೋಕೇಶ್ ನಾಯ್ಕ ವಂದಿಸಿದರು. ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ಕಾವ್ಯಮಯವಾಗಿ ಕಾರ್ಯಕ್ರಮ ನಿರೂಪಿಸಿದರು. ಲತಾ ನಾಯ್ಕ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಶ್ರೀಧರ್ ನಾಯ್ಕ, ನಾಗರಾಜ ನಾಯ್ಕ, ರಾಮನಾಥ ಬಳೆಗಾರ, ಲೋಕೇಶ್ ನಾಯ್ಕ, ರಾಜಶೇಖರ್, ನಾಗೇಶ್ ನಾಯ್ಕ, ರಾಜೇಶ, ಸುಬ್ರಾಯ ನಾಯ್ಕ ಹಾಗೂ ನಾಗಮಾಸ್ತಿ ಯೋಗ ಕೇಂದ್ರದ ನೂರಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು.

More Stories
ಭಟ್ಕಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ
ಭಟ್ಕಳದಲ್ಲಿ ಗ್ರಾಹಕರ ಜಾಗೃತಿ ಕಾರ್ಯಕ್ರಮ
ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಭಟ್ಕಳ ಪಿ.ಎಸ್.ಐ. ನವೀನ್ ನಾಯ್ಕ ಆಯ್ಕೆ