March 31, 2026

ಕೃಷಿ ಭೂಮಿಗೆ ಮಣ್ಣು ತುಂಬುವ ವಿಷಯ ವಿರೋಧ: ಮುಂಡಳ್ಳಿ ಪಂಚಾಯತ್ ಕಚೇರಿ ಮುತ್ತಿಗೆ, ಅಧಿಕಾರಿಗಳ ವಿರುದ್ಧ ಆಕ್ರೋಶ

ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಭೂಮಿಗೆ ಅನಧಿಕೃತವಾಗಿ ಮಣ್ಣು ತುಂಬಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಂಡಳ್ಳಿ ಹೊಸ ಮನೆ ಭಾಗದ ಸಾರ್ವಜನಿಕರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕಣಕನಬೈಲ್ ವಾರ್ಡ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ತಗ್ಗು ಪ್ರದೇಶವಾಗಿದ್ದು, ಮಳೆಗಾಲದಲ್ಲಿ ನೀರು ಸಂಗ್ರಹವಾಗುವುದು ಸಹಜ. ಈ ನೀರು ಬಾಸಿಗುಂಡಿ ಹೊಳೆಗೆ ಸಹಜವಾಗಿ ಹರಿದು ಹೋಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ಪರಿಸ್ಥಿತಿ ಇತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಕೆಲ ಖಾಸಗಿ ವ್ಯಕ್ತಿಗಳು ಮಳೆ ನೀರು ಹರಿಯುವ ಸಹಜ ದಾರಿಯನ್ನು ಮಣ್ಣು ತುಂಬಿ ಮುಚ್ಚಿರುವುದರಿಂದ ಸಮಸ್ಯೆ ಗಂಭೀರಗೊAಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಳೆಗಾಲದ ವೇಳೆ ಪ್ರತಿ ವರ್ಷವೂ ಈ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು, ಸುಮಾರು 50 ಮೀಟರ್ ಅಂತರದಲ್ಲಿರುವ ಶರಾಬಿ ಹೊಳೆ ಸಮೀಪದಲ್ಲೇ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ. ಇದರಿಂದ ಕೃಷಿ ಬೆಳೆಗಳಿಗೆ ಹಾನಿಯಾಗುವುದರ ಜೊತೆಗೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಆಸ್ತಿಪಾಸ್ತಿಗೆ ಹಾನಿ ಹಾಗೂ ಜೀವಾಪಾಯದ ಭೀತಿ ಎದುರಾಗಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದ್ದು, ಈ ಹಿನ್ನೆಲೆ ಸಾರ್ವಜನಿಕರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದರು. ಈಗಾಗಲೇ ಕೃಷಿ ಭೂಮಿಯಲ್ಲಿ ಹಾಕಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಿ, ಮಳೆ ನೀರು ಸಹಜವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರವಾಹ ಪೀಡಿತ ಪ್ರದೇಶವಾಗಿರುವುದರಿಂದ ಈ ಭಾಗದಲ್ಲಿ ಯಾವುದೇ ರೀತಿಯ ಭೂ ಪರಿವರ್ತನೆಗೆ ಅನುಮತಿ ನೀಡಬಾರದು ಎಂದು ಹಿಂದೆಯೇ ಸಾರ್ವಜನಿಕರ ಸಮ್ಮುಖದಲ್ಲಿ ಠರಾವು ಕೈಗೊಳ್ಳಲಾಗಿತ್ತು. ಆದರೂ ಕೆಲ ಅಧಿಕಾರಿಗಳು ಲಂಚ ಪಡೆದು ಕೃಷಿ ಭೂಮಿಯಲ್ಲಿ ಮಣ್ಣು ತುಂಬಲು ಅವಕಾಶ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜು ನಾಯ್ಕ, ಹಿಂದಿನ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಪವಿಭಾಗಾಧಿಕಾರಿಗಳು ಸ್ಥಳ ವೀಕ್ಷಣೆ ನಡೆಸಿ, ಇದು ಮುಳುಗಡೆ ಪ್ರದೇಶವಾಗಿದ್ದು ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದು ಸೂಚಿಸಿದ್ದರು ಎಂದು ಹೇಳಿದರು.

ಪಂಚಾಯತ್ ಕಚೇರಿಗೆ ಆಗಮಿಸಿದ ಪಿಡಿಓಗೆ ಸಾರ್ವಜನಿಕರು ತಹಶೀಲ್ದಾರರನ್ನು ಸ್ಥಳಕ್ಕೆ ಕರೆಯುವಂತೆ ಒತ್ತಾಯಿಸಿದರು. ತಹಶೀಲ್ದಾರರ ಸಂಪರ್ಕ ಸಂಖ್ಯೆ ಇಲ್ಲದೇ ಪಿಡಿಓ ತಡಬಡಾಯಿಸಿದ ಘಟನೆ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು. ಬಳಿಕ ಸಾರ್ವಜನಿಕರೊಬ್ಬರು ಸಂಪರ್ಕ ಸಂಖ್ಯೆ ಒದಗಿಸಿದ ನಂತರ ತಹಶೀಲ್ದಾರರನ್ನು ಸಂಪರ್ಕಿಸಲು ಸಾಧ್ಯವಾಯಿತು. ಇದಲ್ಲದೆ, ಸಮಸ್ಯೆಯನ್ನು ಪ್ರಶ್ನಿಸಲು ಖಾಸಗಿ ವ್ಯಕ್ತಿಯ ಬಳಿ ತೆರಳಿದವರ ಮೇಲೆ ಪೊಲೀಸ ಪ್ರಕರಣ ದಾಖಲಿಸಿರುವುದೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2015ರ ಮಳೆಗಾಲದಲ್ಲಿ ಇದೇ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹದಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದನ್ನು ಗ್ರಾಮಸ್ಥರು ಸ್ಮರಿಸಿದ್ದಾರೆ.
ಸಂಬAಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಳೆ ನೀರು ಹರಿಯುವ ದಾರಿಯಲ್ಲಿ ಹಾಕಿರುವ ಮಣ್ಣನ್ನು ತೆರವುಗೊಳಿಸಿ, ನೀರು ಬಾಸಿಗುಂಡಿ ಹೊಳೆಗೆ ನಿರ್ಬಂಧವಿಲ್ಲದೆ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರು ಹಾಗೂ ಗ್ರಾಮಸ್ಥರು ಹೋರಾಟದ ಮಾರ್ಗವನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜು ನಾಯ್ಕ, ಹರೀಶ ನಾಯ್ಕ, ವಿಷ್ಣು ನಾಯ್ಕ, ಮಾದೇವ ನಾಯ್ಕ, ಮಾಸ್ತಪ್ಪ ನಾಯ್ಕ, ನಾಗರತ್ನ ನಾಯ್ಕ, ಪದ್ಮ ನಾಯ್ಕ, ಆರತಿ ನಾಯ್ಕ, ಪಾರ್ವತಿ ನಾಯ್ಕ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

error: Content is protected !!