April 22, 2026

ಡಾ. ಜಿ.ಎಸ್. ಹೆಗಡೆ ಅವರಿಗೆ ಭವ್ಯ ನಾಗರಿಕ ಸನ್ಮಾನ


ಅಳ್ಳಂಕಿ,ಹೊನ್ನಾವರ : ಮಾನವೀಯ ಮೌಲ್ಯಗಳೊಂದಿಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ ಹೇಳಿದರು. ಅವರು ನಿವೃತ್ತಿ ಹೊಂದುತ್ತಿರುವ ಅಳ್ಳಂಕಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್. ಹೆಗಡೆ ಅವರಿಗೆ ವರಸಿದ್ಧಿ ವಿನಾಯಕ ದೇವರ ಪುನರಾಷ್ಟಬಂಧ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನ ಸೇವಾ ಸಮಿತಿ ಮತ್ತು ಗ್ರಾಮ ಸುಧಾರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಡಾ. ಹೆಗಡೆ ಅವರು 29 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಅಳ್ಳಂಕಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಸಮಾಜಮುಖಿ ಹಾಗೂ ನಿಶ್ಕಳಂಕ ಸೇವೆಯಿಂದ ಈ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿ ವೇಗ ಪಡೆದುಕೊಂಡಿದ್ದು, ಸಂಸ್ಕಾರಯುತ ಶಿಕ್ಷಣ ಬೆಳೆಯಲು ಕಾರಣವಾಗಿದೆ ಎಂದು ಅವರು ಹೇಳಿದರು. ಸರ್ಕಾರಿ ಕಾಲೇಜುಗಳ ಮಟ್ಟದಲ್ಲಿಯೇ ರಾಜ್ಯ ಮಟ್ಟದಲ್ಲಿ ಎಂಟನೇ ರ್ಯಾಂಕ್ ಸಾಧನೆ ಮಾಡಿರುವುದು ಹಾಗೂ ಎಲ್ಲಾ ವಿಭಾಗಗಳಲ್ಲೂ ಶೇಕಡಾ 100 ಫಲಿತಾಂಶ ದಾಖಲಿಸಿರುವುದು ಡಾ. ಹೆಗಡೆಯವರ ಶ್ರಮದ ಫಲವಾಗಿದೆ ಎಂದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಉದಯ ಬಾಂದೇಕರ, ಡಾ. ಹೆಗಡೆಯವರ ಶಿಕ್ಷಣದ ದೃಷ್ಟಿಕೋನ ಗ್ರಾಮೀಣ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದು, ತಮ್ಮಂತಹ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿದೆ ಎಂದು ಪ್ರಶಂಸಿಸಿದರು.


ಕಾರ್ಯಕ್ರಮದಲ್ಲಿ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಯೋಗೇಶ ರಾಯ್ಕರ್ ಉಪ್ಪೋಣಿ, ಸಾಮಾಜಿಕ ಕಾರ್ಯಕರ್ತ ರಾಮದಾಸ ನಾಯ್ಕ ಅಡಕಾರ, ಕಾಲೇಜಿನ ಹಿರಿಯ ಉಪನ್ಯಾಸಕ ಕಿಶೋರ ನಾಯ್ಕ ಸೇರಿದಂತೆ ಹಲವರು ಡಾ. ಹೆಗಡೆಯವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು. ಉಪನ್ಯಾಸಕರಾದ ಮಂಜುನಾಥ ನಾಯ್ಕ, ಸುಬ್ರಹ್ಮಣ್ಯ ಹೆಗಡೆ, ಶ್ರೀಕಾಂತ ಅಂಕೋಲೇಕರ, ವೃಂದಾ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.


ಕು. ಮಧುರಾ ನಾಯ್ಕ ಪ್ರಾರ್ಥನೆ ನೆರವೇರಿಸಿದರು. ಗೀತಾ ಕೊಚರೇಕರ ಸ್ವಾಗತಿಸಿ, ಎಂ.ಟಿ. ನಾಯ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು.

About The Author

error: Content is protected !!