June 7, 2026

ಶಿರಾಲಿ ಚಿಪ್ಪಿಕಲ್ಲು ದುರಂತ: ಸಂತ್ರಸ್ತ ಕುಟುಂಬಗಳಿಗೆ ರೂ.3 ಲಕ್ಷ ಧನಸಹಾಯ ನೀಡಿದ ಮಾಸ್ತಪ್ಪ ನಾಯ್ಕ ಬಲಸೆ

ಭಟ್ಕಳ: ತಾಲೂಕಿನ ಶಿರಾಲಿ ಭಾಗದಲ್ಲಿ ಚಿಪ್ಪಿಕಲ್ಲು ಮೀನುಗಾರಿಕೆಗೆ ತೆರಳಿದ್ದ 11 ಜನರು ದುರ್ಮರಣಕ್ಕೀಡಾದ ದುರಂತದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಜನಪರ ಮುಖಂಡರಾದ ಶ್ರೀ ಮಾಸ್ತಪ್ಪ ನಾಯ್ಕ ಬಲಸೆ ಅವರು ದಿನಾಂಕ 04-06-2026 ರಂದು ಸಂತ್ರಸ್ತ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮೃತಪಟ್ಟ 10 ಕುಟುಂಬಗಳಿಗೆ ತಲಾ ರೂ.25,000 ಹಾಗೂ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳ ಶಿಕ್ಷಣಕ್ಕಾಗಿ ರೂ.50,000 ಧನಸಹಾಯವನ್ನು ವಿತರಿಸುವ ಮೂಲಕ ಒಟ್ಟು ರೂ.3 ಲಕ್ಷ ರೂಪಾಯಿಗಳ ನೆರವು ನೀಡಿದರು. ಬಳಿಕ ಮಾತನಾಡಿದ ಅವರು, ಶಿರಾಲಿಯಲ್ಲಿ ನಡೆದಿರುವ ಈ ದುರಂತ ಅತ್ಯಂತ ಗಂಭೀರ ಹಾಗೂ ನೋವಿನ ಸಂಗತಿಯಾಗಿದ್ದು, ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.

ಜೊತೆಗೆ ಜಿಲ್ಲೆಯ ವಿವಿಧ ಸಂಘ-ಸAಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು, ಜನಪ್ರತಿನಿಧಿಗಳು ಹಾಗೂ ರಾಜಕೀಯ ವ್ಯಕ್ತಿಗಳು ಮಾನವೀಯ ದೃಷ್ಟಿಯಿಂದ ಮುಂದೆ ಬಂದು ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಾದಷ್ಟು ನೆರವು ನೀಡಬೇಕು ಎಂದು ಮನವಿ ಮಾಡಿದರು. ಇಂತಹ ಸಂಕಷ್ಟದ ಸಮಯದಲ್ಲಿ ನೋವಿನಲ್ಲಿರುವ ಕುಟುಂಬಗಳ ಜೊತೆ ಸಮಾಜ ನಿಲ್ಲಬೇಕು. ಅನಾಥರಾದ ಮಕ್ಕಳ ಭವಿಷ್ಯಕ್ಕಾಗಿ ಎಲ್ಲರೂ ಕೈಜೋಡಿಸುವ ಅಗತ್ಯವಿದೆ,” ಎಂದು ಅವರು ಹೇಳಿದರು.

ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಕುಟುಂಬದ ನಾಲ್ವರು ಮಕ್ಕಳಲ್ಲಿ ಒಬ್ಬಳು ಪಿಯುಸಿ ದ್ವಿತೀಯ ವರ್ಷವನ್ನು ಪೂರ್ಣಗೊಳಿಸಿ, ಮುಂದಿನ ಜೀವನಕ್ಕೆ ಆಧಾರವಿಲ್ಲದ ಕಾರಣ ತಾಲೂಕಿನಲ್ಲಿ ಯಾವುದಾದರೂ ಕೆಲಸ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿರುವುದು ನಿಜಕ್ಕೂ ಹೃದಯ ವಿದ್ರಾವಕ ಸಂಗತಿಯಾಗಿದೆ. ಇಂತಹ ಅನಾಥ ಮಕ್ಕಳ ಪರಿಸ್ಥಿತಿ ಅತ್ಯಂತ ಸಂಕಷ್ಟಕರವಾಗಿದ್ದು, ಸರ್ಕಾರದ ಮಟ್ಟದಲ್ಲಿ ವಿಶೇಷ ಗಮನ ಹರಿಸಿ ಅವರಿಗೆ ಉದ್ಯೋಗ ಹಾಗೂ ಶಿಕ್ಷಣದ ಭದ್ರತೆಯನ್ನು ಒದಗಿಸಬೇಕಾಗಿದೆ.

ಶಿಕ್ಷಣ ಪಡೆದಿರುವ ಈ ಯುವತಿಗೆ ಆಕೆಯ ಅರ್ಹತೆಗೆ ಅನುಗುಣವಾಗಿ ತಕ್ಷಣವೇ ತಾಲೂಕಿನ ಯಾವುದಾದರೂ ಬ್ಯಾಂಕ್, ಸಹಕಾರ ಸಂಘ ಅಥವಾ ಸಂಸ್ಥೆಯಲ್ಲಿ ಉದ್ಯೋಗದ ಅವಕಾಶ ಕಲ್ಪಿಸಿ ಆಕೆಯ ಕುಟುಂಬಕ್ಕೆ ಆಸರೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಅದೇ ರೀತಿ ತಾಲೂಕಿನ ಸಹಕಾರಿ ಬ್ಯಾಂಕುಗಳು, ಸೊಸೈಟಿಗಳು ಹಾಗೂ ದಾನಿಗಳು ಮಾನವೀಯತೆ ತೋರಿಸಿ ಈ ಕುಟುಂಬದ ನೆರವಿಗೆ ಧಾವಿಸಬೇಕಿದೆ.

ಅನಾಥರಾದ ಈ ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಸಮಾಜದ ಮೇಲಿದೆ. ಸಂಬAಧಪಟ್ಟ ಅಧಿಕಾರಿಗಳು ಹಾಗೂ ಸಂಸ್ಥೆಗಳು ಸ್ಪಂದಿಸಿ ಈ ಮಕ್ಕಳಿಗೆ ಬದುಕಿನ ಹೊಸ ಭರವಸೆ ನೀಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ಮಾಸ್ತಪ್ಪ ನಾಯ್ಕ ಬಲಸೆ ಅವರು, ಮುಂದಿನ ದಿನಗಳಲ್ಲಿಯೂ ಅವರ ಪರವಾಗಿ ಅಗತ್ಯ ನೆರವು ಹಾಗೂ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಭರವಸೆ ನೀಡಿದರು.

About The Author

error: Content is protected !!