June 10, 2026

ಪ್ರಶಾಂತ್ ಹೆಗಡೆ ಮೂಡಲಮನೆ ಅವರ 5 ಕೃತಿಗಳ ಲೋಕಾರ್ಪಣೆ

ಹೊನ್ನಾವರ: “ಗುರುವನ್ನು ಮೀರಿಸುವ ವಿದ್ಯಾರ್ಥಿ ಸಿಕ್ಕರೆ ಗುರುವಿಗೆ ಅದಕ್ಕಿಂತ ಮಿಗಿಲಾದ ಸಂತೋಷ ಇನ್ನೊಂದಿಲ್ಲ. ಕವಿಗಳಿಗೆ ಸದಾ ಒಂದು ಕಷ್ಟವಿರುತ್ತದೆ; ತಾವು ಬರೆದದ್ದನ್ನು ಸಹೃದಯತೆಯಿಂದ ಮೆಚ್ಚಿಕೊಳ್ಳುವ ಓದುಗರು ಅವರಿಗೆ ಸಿಗಬೇಕಿರುತ್ತದೆ” ಎಂದು ಹಿರಿಯ ಸಾಹಿತಿ ಹಾಗೂ ವಾಗ್ಮಿ ಡಾ. ಶ್ರೀಪಾದ್ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸತ್ವಾಧಾರ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಲೇಖಕ ಪ್ರಶಾಂತ್ ಹೆಗಡೆ ಮೂಡಲಮನೆ ಅವರ ಐದು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

​ಪ್ರಶಾಂತ್ ಹೆಗಡೆ ಅವರು ರಚಿಸಿದ ‘ಪಾರಿಜಾತ’ (ಕವನ ಸಂಕಲನ), ‘ಹುಲಿ ಬೇಟೆ ಕೆಂಚ’ (ಮಕ್ಕಳ ನಾಟಕ), ‘ಸಪ್ಪೋಡ್ತಿ’ (ಕಾಡಿನ ಒಡಲ ಕಥೆ), ‘ಮಿಂಚುಳ್ಳಿ’ (ಹಾಯ್ಕುಗಳು) ಮತ್ತು ‘ಅಪ್ಪ ಅಂದ್ರೆ ನಂಗಿಷ್ಟ’ ಎಂಬ 5 ಪುಸ್ತಕಗಳನ್ನು ಈ ವೇಳೆ ಲೋಕಾರ್ಪಣೆಗೊಳಿಸಲಾಯಿತು.

ಮುಂದುವರಿದು ಮಾತನಾಡಿದ ಡಾ. ಶೆಟ್ಟಿ, “ಒಳ್ಳೆಯ ಗುಣ ಎಲ್ಲರಲ್ಲಿಯೂ ಇರುವುದಿಲ್ಲ, ಅದನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳುವ ಕೆಲಸ ಆಗಬೇಕಿದೆ. ಇಂದಿನ ದಿನಗಳಲ್ಲಿ ಇನ್ನೊಬ್ಬರಿಗೆ ತೊಂದರೆ ಕೊಟ್ಟು ಬದುಕುವವರೇ ಹೆಚ್ಚಾಗುತ್ತಿದ್ದಾರೆ. ನಾವು ಲೋಕಾಂತಕ್ಕೆ ತೆರೆದುಕೊಳ್ಳುವಾಗ ಏಕಾಂತ ಮರೆಯಾಗುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.

ಸಾಹಿತ್ಯಕ್ಕೆ ಸಾಮಾಜಿಕ ಜವಾಬ್ದಾರಿ ಅಗತ್ಯ: ಜಿ.ಯು.ಭಟ್ಟ

​ಕಾರ್ಯಕ್ರಮದಲ್ಲಿ ಮತ್ತೊಬ್ಬ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಮಾತನಾಡಿ, “ಸಾಹಿತಿ ಆದವನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಇಡೀ ಜಗತ್ತು ನಡೆಯುತ್ತಿರುವುದೇ ಪುಸ್ತಕಗಳ ಮೇಲೆ, ಅದಕ್ಕೆ ಧರ್ಮಗ್ರಂಥಗಳೇ ಸಾಕ್ಷಿ. ಸಿದ್ಧಾಂತಗಳು ಬೇರೆ ಬೇರೆ ಇರಬಹುದು, ಆದರೆ ಸಾಹಿತ್ಯದಿಂದ ಸಮಾಜಕ್ಕೆ ಏನು ಸಿಗುತ್ತದೆ ಎಂಬುದು ಮುಖ್ಯ. ಸಾಹಿತ್ಯದಲ್ಲಿ ಕೃತಿಗಳ ಸಂಖ್ಯೆ ಮುಖ್ಯವಲ್ಲ, ಅದರಲ್ಲಿರುವ ಸತ್ವ ಮುಖ್ಯ. ಇಂದು ಪುಸ್ತಕಗಳು ಹೆಚ್ಚಾಗಿ ಪ್ರಕಟಗೊಳ್ಳುತ್ತಿದ್ದರೂ ಓದುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಈ ನೆಲದ ಸದ್ಯದ ಪರಿಸ್ಥಿತಿಯಾಗಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕೃತಿಗಳು ಹೆಚ್ಚಾಗಿ ಬರಬೇಕಿದೆ” ಎಂದರು.

ಅತಿಥಿ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, “ವಿದ್ವತ್ ಇದ್ದರೂ ಸಹ ಅದನ್ನು ಜನರಿಗೆ ತಲುಪಿಸುವ ಸಾಮರ್ಥ್ಯ ಎಲ್ಲರಲ್ಲಿಯೂ ಇರುವುದಿಲ್ಲ. ಆದರೆ ಪ್ರಶಾಂತ್ ಹೆಗಡೆ ಅವರು ಈ ವಿಷಯದಲ್ಲಿ ವಿಭಿನ್ನವಾಗಿ ನಿಲ್ಲುತ್ತಾರೆ. ತಮ್ಮ ವೃತ್ತಿಯನ್ನು ಅಗಾಧವಾಗಿ ಪ್ರೀತಿಸುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಬೇಕಿದೆ” ಎಂದು ಹಾರೈಸಿದರು.

ಕಾರ್ಯಕ್ರಮದ ಇತರ ಅತಿಥಿಗಳಾಗಿ ಆಗಮಿಸಿದ್ದ ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್.ಗೌಡ, ತೆರಿಗೆ ಸಲಹೆಗಾರ್ತಿ ಶ್ರೀಮತಿ ಸಂಧ್ಯಾ ಹೆಗಡೆ ಕೂಜಳ್ಳಿ, ಶಿಕ್ಷಕಿ ಮಮತಾ ಹೆಗಡೆ, ಹಾಗೂ ಉಪನ್ಯಾಸಕ ಚಿದಾನಂದ ಬಂಢಾರಿ ಅವರು ಮಾತನಾಡಿ ಲೇಖಕರಿಗೆ ಶುಭ ಕೋರಿದರು. ಕುಮಟಾದ ಲೆಕ್ಕಪರಿಶೋಧಕ ವಿನಾಯಕ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

  • ಪ್ರಾರ್ಥನೆ: ಕು. ಅದ್ವಿಕಾ ಹೆಗಡೆ
  • ಸ್ವಾಗತ: ಲೇಖಕ ಪ್ರಶಾಂತ್ ಹೆಗಡೆ ಮೂಡಲಮನೆ
  • ಆಶಯ ನುಡಿ: ಸಾಹಿತಿ ಹಾಗೂ ಕನ್ನಡ ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ
  • ನಿರೂಪಣೆ: ಉಪನ್ಯಾಸಕ ವಿದ್ಯಾಧರ ನಾಯ್ಕ ಕಡತೋಕ
  • ವಂದನಾರ್ಪಣೆ: ಸತ್ವಾಧಾರ ಫೌಂಡೇಶನ್ ಸಂಸ್ಥಾಪಕ ಗಣೇಶ್ ಜೋಶಿ

About The Author

error: Content is protected !!