October 6, 2025

ಒಂದು ತಿಂಗಳೊಳಗೆ ಆಸ್ಪತ್ರೆ ಯಂತ್ರೋಪಕರಣಕ್ಕೆ ಟೆಂಡರ್ ಕರೆಯದಿದ್ದರೆ ಹೋರಾಟ

ಶಿರಸಿ: ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸಕರಿದ್ದ ಸಮಯದಲ್ಲಿ ಶಿರಸಿಗೆ ಕೊಡುಗೆಯಾಗಿ ಕೊಟ್ಟಂತಹ ಆಸ್ಪತ್ರೆ ಪ್ರಾರಂಭವಾದರೆ ಬಿಜೆಪಿ ಸರ್ಕಾರಕ್ಕೆ ಆಸ್ಪತ್ರೆ ನಿರ್ಮಾಣ ಮಾಡಿದ ಕ್ರೆಡಿಟ್ ಸಿಗತ್ತದೆ ಎಂಬ ಭ್ರಮೆಯಿಂದ ಈಗಿನ ಶಾಸಕರು ಸರ್ಕಾರ ಆಸ್ಪತ್ರೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ಮುಂದಿನ ಚುನಾವಣೆವರೆಗೂ ಆಸ್ಪತ್ರೆ ವಿಚಾರವನ್ನು ತಳ್ಳುತ್ತಾ ಎಲೆಕ್ಷನ್ ಟೈಮಿನಲ್ಲಿ ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರೆ ನಾವು ಆಸ್ಪತ್ರೆ ಮಾಡುತ್ತೇವೆ ಎನ್ನೋಣ ಎಂದು ನಾಟಕ ಮಾಡುತ್ತಿದ್ದೀರಾ? ಜನರಿಗೆ ಈ ಆಸ್ಪತ್ರೆ ಅವಶ್ಯಕತೆ ಎಷ್ಟಿದೆ ಎನ್ನುವುದರ ಅರಿವಿದೆಯೇ? ಎಷ್ಟು ಜನರ ಜೀವ ಜೀವನ ಹಾಳಾಗುತ್ತಿದೆ ಎನ್ನುವ ಕಲ್ಪನೆ ಇದೆಯೇ ? 80% ಕಾಮಗಾರಿ ಮುಗಿದ ಕಾರಣ ಕೂಡಲೇ ವೈದ್ಯರ ನೇಮಕಾತಿ ಆಗಬೇಕು, ಯಂತ್ರೋಪಕರಣಗಳಿಗೆ ಟೆಂಡರ್ ಕರೆಯಬೇಕು, ಇನ್ನೂ 30 ದಿನದಲ್ಲಿ ಟೆಂಡರ್ ಆಗಿಲ್ಲ ಎಂದಾದಲ್ಲಿ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ “ಆಸ್ಪತ್ರೆ ಹೋರಾಟ ಸಮಿತಿ” ರಚಿಸಿ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಅವರು ಭಾನುವಾರ ಪತ್ರಿಕಾಭವನದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಶಾಸಕರಾದ ಭೀಮಣ್ಣನವರು ಸುದ್ಧಿಗೋಷ್ಟಿಯಲ್ಲಿ ಮಾತನಾಡುವಾಗ ನನ್ನ ಕುರಿತಾಗಿ ‘ಅನ್ಕಲ್ಚರ್ ರಾಜಕಾರಣಿ’ ಅಂತ ಹೇಳಿದ್ದರು. ಜನರ ಸಮಸ್ಯೆ ಹೇಳಿದರೆ ವೈಯಕ್ತಿಕ ಟಾರ್ಗೆಟ್ ಮಾಡುವ ಅವಶ್ಯಕತೆ ಏನಿದೆ? ನಾನು ಇವತ್ತಿನ ವರೆಗೂ ಒಂದೇ ಒಂದು ಅಸಂವಿಧಾನಿಕ ಶಬ್ದ ಉಪಯೋಗಿಸಿಲ್ಲ ಎನ್ನುವುದು ಜನರ ಗಮನಕ್ಕಿದೆ ಎಂದರು. ಶಾಸಕರಿಗೆ ನಮ್ಮದೊಂದಿಷ್ಟು ಪ್ರಶ್ನೆಗಳಿದ್ದು, ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಹಿಂದಿನ ಸರಕಾರದಲ್ಲಿ ಸರಕಾರಿ ಆಸ್ಪತ್ರೆಗಾಗಿ ಯಂತ್ರೋಪಕರಣಗಳಿಗಾಗಿ ಮೀಸಲಾಗಿ ಇಟ್ಟಿದ್ದ 30 ಕೋಟಿ ಹಣವನ್ನು ಮಾಯ ಮಾಡಿ ನಿಮ್ಮ ಸರ್ಕಾರದಲ್ಲಿ 5.20 ಕೋಟಿ ಪ್ರಸ್ತಾವನೆ ಕಳಿಸಿದ್ದೀರಿ ಎಂಬುದಾಗಿ ದಾಖಲೆ ನೀಡಿ, ಹಲವಾರು ಬಾರಿ ಆರೋಪಿಸಿದರೂ ಇನ್ನೂ ಯಾಕೆ ಉತ್ತರಿಸುತ್ತಿಲ್ಲ ಈಗಾಗಲೇ ಪ್ರಸ್ತಾವನೆ ಕಳಿಸಿ ಒಂದು ವರ್ಷವಾಗಿದೆ. ಜೊತೆಗೆ 80% ಕಾಮಗಾರಿ ಈಗಾಗಲೇ ಮುಗಿದಿದೆ, ಯಾವಾಗ ಮುಂದಿನ ಕ್ರಮ ಕೈಗೊಳ್ಳುತ್ತೀರಿ ? ಆರೋಗ್ಯ ಮಂತ್ರಿಗಳಾಗಿರುವ ದಿನೇಶ ಗುಂಡೂರಾವ್ ಅವರು ಆಗಮಿಸಿದಾಗ ಈಗಾಗಲೇ ಮೇಲ್ದರ್ಜೆಗೇರಿಸಿರುವ ಆಸ್ಪತ್ರೆಯನ್ನು ನಾವು ಮತ್ತೆ ಮೇಲ್ದರ್ಜೆಗೇರಿಸುತ್ತೇವೆ ಎಂದು ನಾಟಕ ಮಾಡುವ ಅವಶ್ಯಕತೆ ಏನಿದೆ? ಯಂತ್ರೋಪಕಣಗಳಿಗೆ ಹಿಂದಿನ ಸರ್ಕಾರದಲ್ಲಿ ಇಟ್ಟ ಹಣ ಬಿಡುಗಡೆ ಮಾಡಿದರೆ ಆಯ್ತಲ್ಲವೇ? ಬಸ್ ವಿಚಾರವಾಗಿ ಶಿರಸಿ ಘಟಕದಲ್ಲಿ 79 ಬಸ್ಸುಗಳು 10 ಲಕ್ಷ ಕಿ.ಮೀಗೂ ಅಧಿಕ ರನ್ ಆಗಿರುವುದಿದೆ ಎಂದು ಹೇಳಿದ ಕೂಡಲೇ ತಾವು ಥಟ್ಟಂತ ಸುಳ್ಳು ಹೇಳಿದ್ದೀರಿ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದು ಬಸ್ ಖರೀದಿ ಮಾಡಿಲ್ಲ ಎಂಬುದಾಗಿ ಹೇಳಿದ್ದೀರಿ, ಆದರೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ 87 ಹೊಸ ಬಸ್ ಬಂದಿದೆ. ಈ ರೀತಿ ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಸುಳ್ಳು ಹೇಳಿದ್ದಕ್ಕೆ ತಾವು ವಿಷಾದ ವ್ಯಕ್ತಪಡಿಸುತ್ತೀರಾ? ಒಬ್ಬ ಶಾಸಕರಾದವರು ಈ ರೀತಿ ಬೇಕಾಬಿಟ್ಟಿಯಾಗಿ ಮಾತನಾಡಬಹುದೇ, ಇಡೀ ಕ್ಷೇತ್ರದಲ್ಲಿ ಬಸ್ ವ್ಯವಸ್ಥೆ ಹಾಳಾಗಿದೆ, ಸರಿ ಮಾಡಿಸುತ್ತೇನೆ ಎಂದು ಯಾವಾಗ ಹೇಳುತ್ತೀರಿ ? ನಾವು ರಾಜ್ಯ ಸರ್ಕಾರದ ವ್ಯಾಪ್ತಿಯ ರಸ್ತೆಗುಂಡಿ ಮುಚ್ಚಿ ಅಂದರೆ ನೀಲೆಕಣಿ ಮತ್ತು ಹಾವೇರಿ ರಸ್ತೆ ಬಗ್ಗೆ ಮಾತಾಡಿದ್ದೀರಿ. ಆದರೆ ಸಂಸದರು ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಮಾಡಿದ್ದರು. ಈಗ ಹೈವೇ ಕೆಲಸ ಪ್ರಾರಂಭವಾಗಿದೆ, ನಿಮ್ಮದು ಯಾವಾಗ ಅಂತ ನಾವು ಕೇಳುತ್ತಿದ್ದೇವೆ. ನಮ್ಮ ಈ ಪ್ರಶ್ನೆಗಳಿಗೆ ತಾವು ಉತ್ತರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರೇ ತಮಗೆ ಉತ್ತರ ನೀಡುತ್ತಾರೆ ಎಂದು ಅವರು ಹೇಳಿದರು.

ಪ್ರಮುಖರಾದ ಜಯಶೀಲ ಗೌಡ ಮಾತನಾಡಿ, ನೆನೆಗುದಿಗೆ ಬಿದ್ದಿರುವ ಆಸ್ಪತ್ರೆ ವಿಚಾರದಲ್ಲಿ ಶೇ.80 ರಷ್ಟು ಕೆಲಸ ಪೂರ್ಣಗೊಂಡಿದ್ದರೂ ಸಹ ಇನ್ನೂ ಉಳಿದ ಟೆಂಡರ್ ಚಟುವಟಿಕೆ ಆಗಿಲ್ಲ. ಬಡವರು ಸಂಕಷ್ಟದಲ್ಲಿದ್ದಾರೆ. ಆದಷ್ಟು ಶೀಘ್ರ ಆಸ್ಪತ್ರೆ ಸೌಲಭ್ಯ ಜನರಿಗೆ ಸಿಗಲಿ ಎಂದರು.

ಮತ್ತೀಘಟ್ಟ ಭಾಗದ ಗ್ರಾಪಂ ಸದಸ್ಯ ನಾರಾಯಣ ಹೆಗಡೆ ಮಾತನಾಡಿ, ಶಿರಸಿ ಸಿದ್ದಾಪುರ ಯಾವುದೇ ಗ್ರಾಮೀಣ ರಸ್ತೆ ಸರಿ ಇಲ್ಲ, ಲೋಕೋಪಯೋಗಿ ವಿಭಾಗದ, ಜಿಲ್ಲಾ ಪಂಚಾಯತ್ ವಿಭಾಗದ ಒಂದು ರಸ್ತೆಯೂ ಸರಿ ಇಲ್ಲ, ಕಳೆದ ವರ್ಷದ ಹೊಂಡ ಮುಚ್ಚಿದ ಹಣವನ್ನೇ ಇನ್ನೂ ಗುತ್ತಿಗೆದಾರರಿಗೆ ಕೊಟ್ಟಿಲ್ಲ, ಈ ವರ್ಷ ರಿಪೇರಿ ಹಾಗಿರಲಿ ಹೊಂಡವನ್ನೇ ಮುಚ್ಚಿಲ್ಲ? ಇದರಿಂದ ಗ್ರಾಮೀಣ ಜನತೆಗೆ ತೊಂದರೆಯಾಗುತ್ತಿದೆ ಎಂದರು.

ನಿವೃತ್ತ ಸಾರಿಗೆ ಅಧಿಕಾರಿ 10 ಲಕ್ಷ ಕಿ.ಮೀಗಿಂತ ಹೆಚ್ಚು ಓಡಿರುವ ಬಸ್ಗಳು ಅಪಘಾತವಾದರೆ ಜವಾಬ್ದಾರಿಯಾಗುತ್ತಾರೆ. ಈ ಕೂಡಲೇ ಜನರಿಗೆ ಸುರಕ್ಷತೆ ನಿಟ್ಟಿನಲ್ಲಿ ಶಾಸಕರು ಕ್ರಮ ಕೈಗೊಳ್ಳಲಿ ಎಂದರು. ಸುದ್ದಿಗೋಷ್ಟಿಯಲ್ಲಿ ಶಿವಾನಂದ ದೇಶಳ್ಳಿ ಇದ್ದರು.

About The Author

error: Content is protected !!