December 23, 2025

ಭಟ್ಕಳದಲ್ಲಿ ಚಿನ್ನ  ಕಳ್ಳತನ,ಮಂಗಳೂರಿನಲ್ಲಿ ಬೈಕ್ ಕಳವು: ಸರಣಿ ಅಪರಾಧಗಳಲ್ಲಿ ಕುಖ್ಯಾತ ದರೋಡೆಕೋರ ಬಂಧನ

ಭಟ್ಕಳ : ತಾಲೂಕಿನ ಬೆಳಕೆ ಗರಡಿ ಹಿತ್ತಲು ಪ್ರದೇಶದಲ್ಲಿ ಕೋರಿಯರ್ ನೀಡುವ ನೆಪದಲ್ಲಿ ವಯೋವೃದ್ಧ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಪ್ರಕರಣ ಹಾಗೂ ಮಂಗಳೂರಿನಲ್ಲಿ ಮೋಟಾರ್ ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರು ಕದ್ರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಭಟ್ಕಳ ತಾಲೂಕಿನ ಬೆಳಕೆ ಗರಡಿ ಹಿತ್ತಲು ನಿವಾಸಿ ಹೊನ್ನಮ್ಮ ಮಹಾದೇವ ನಾಯ್ಕ (70) ಅವರ ಮನೆಗೆ ಕೋರಿಯರ್ ನೀಡುವುದಾಗಿ ಹೇಳಿಕೊಂಡು ಬಂದ ಆರೋಪಿಗಳು, ಅವಕಾಶ ಕಂಡು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಬೈಕ್‌ನಲ್ಲಿ ಪರಾರಿಯಾಗಿದ್ದರು. ಈ ಘಟನೆ ಭಟ್ಕಳ ನಗರದಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಇದೇ ವೇಳೆ, ಡಿ.12ರಂದು ಮಂಗಳೂರಿನ ಯೆಯ್ಯಾಡಿ ಶ್ರೀಹರಿ ಕಾಂಪ್ಲೆಕ್ಸ್ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಯಮಹಾ ಕಂಪನಿಯ
ಬೈಕ್ ಕಳವು ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು, ಉಳ್ಳಾಲ ನಿವಾಸಿ ಫೈಸಲ್ ಅಲಿಯಾಸ್ ತೋಟ ಪೈಸಲ್ ಹಾಗೂ ಮೈಸೂರಿನ ವಿನಾಯಕ ನಗರ ನಿವಾಸಿ ನಿತೀನ್ ಕುಮಾರ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ವಿಚಾರಣೆಯ ವೇಳೆ, ಆರೋಪಿಗಳು ಭಟ್ಕಳದ ವಯೋವೃದ್ಧ ಮಹಿಳೆಯ ಚಿನ್ನ ಕಸಿತ ಪ್ರಕರಣದಲ್ಲೂ ಹಾಗೂ ಮಂಗಳೂರಿನ ಬೈಕ್ ಕಳವು ಪ್ರಕರಣದಲ್ಲೂ ತಾವು ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಒಂದು ಚಿನ್ನದ ಸರ (ಅಂದಾಜು ಮೌಲ್ಯ ರೂ.1.20 ಲಕ್ಷ) ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬೈಕ್‌ (ಅಂದಾಜು ಮೌಲ್ಯ ರೂ.45 ಸಾವಿರ) ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಮುಖ ಆರೋಪಿ ಫೈಸಲ್ ಅಲಿಯಾಸ್ ತೋಟ ಪೈಸಲ್ ವಿರುದ್ಧ ಉಡುಪಿ, ಕಾರ್ಕಳ, ಮಣಿಪಾಲ, ಮಂಗಳೂರು, ಬೆಳ್ತಂಗಡಿ, ವಿಟ್ಲ ಕಂಕನಾಡಿ ನಗರ, ಪುತ್ತೂರು, ಶಿರ್ವ, ಸುರತ್ಕಲ್, ಕಡಬ, ಕೊಣಾಜೆ, ಮಡಿಕೇರಿ ಕುಶಾಲನಗರ ಸೇರಿದಂತೆ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲದೆ ಕೇರಳ ರಾಜ್ಯದಲ್ಲಿಯೂ ರಾಬರಿ, ದರೋಡೆ, ಕಳ್ಳತನ ಹಾಗೂ ಕೊಲೆ ಸೇರಿ ಸುಮಾರು 42ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಆರೋಪಿ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 10ಕ್ಕಿಂತ ಹೆಚ್ಚು ಜಾಮೀನು ರಹಿತ ವಾರೆಂಟ್‌ಗಳು ಬಾಕಿಯಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದ್ದು, ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author

error: Content is protected !!