December 24, 2025

ಪೌರಕಾರ್ಮಿಕರ ಸನ್ಮಾನ ಪವಿತ್ರ ಕಾರ್ಯ – ಡಾ. ಮಂಜುನಾಥ್ ಭಂಡಾರಿ.

ನಗರಾಡಳಿತ ವ್ಯವಸ್ಥೆಯಲ್ಲಿ ಪೌರಕಾರ್ಮಿಕರ ಸೇವೆಯನ್ನು ಕಡೆಗಣಿಸುವ ಹಾಗೇ ಇಲ್ಲ. ಆದರೆ ಅವರ ಸೇವೆಗೆ ಸಿಗಬೇಕಾದ ಮಾನ್ಯತೆಯು ಹೆಚ್ಚಿನ ಕಡೆಗಳಲ್ಲಿ ದೊರೆಯುವುದಿಲ್ಲ. ಅವರನ್ನು ಸನ್ಮಾನಿಸುವುದು ಅತ್ಯಂತ ಪವಿತ್ರವಾದ ಕಾರ್ಯ. ಕಾರ್ಕಳದ ಪುರಸಭೆಯ ಸದಸ್ಯರಾದ ಶುಭದ್ ರಾವ್ ಅವರು ತಮ್ಮ ಪುರಸಭೆಯ ಸದಸ್ಯತ್ವದ ಮೂರು ಅವಧಿಯನ್ನು ಪೂರ್ತಿ ಮಾಡುವ ಸಂದರ್ಭದಲ್ಲಿ (ಸತತ 18 ವರ್ಷ) ಅವರು ಏರ್ಪಡಿಸಿದ ಸಾರ್ವಜನಿಕರಿಗೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದಲ್ಲಿ ಕಾರ್ಕಳ ಪುರಸಭೆಯ ಎಲ್ಲ 48 ಪೌರ ಕಾರ್ಮಿಕರು, ಪೌರ ನೌಕರರು, ಹಾಗೂ‌ ಪುರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿದ್ದು ಅತ್ಯಂತ ಸ್ಮರಣೀಯವಾದ ಕಾರ್ಯ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರೂ, ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಸ್ಥಾಪಕರೂ ಆದ ಡಾ. ಮಂಜುನಾಥ್ ಭಂಡಾರಿ ಅವರು ಅಭಿಪ್ರಾಯಪಟ್ಟರು.

ಅವರು ಮುಂದುವರೆದು ರಾಜಕೀಯ ನೇತಾರರಿಗೆ ನಿವೃತ್ತಿ ಎಂಬುದಿಲ್ಲ. ಸಹಾಯ ಕೇಳಿಬಂದ ಎಲ್ಲ ಪಕ್ಷದವರ ಕೆಲಸವನ್ನು ಮಾಡಿಕೊಡುವ ರಾಜಕೀಯ ನಾಯಕರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದರು. ಅವರು ಈ 18 ವರ್ಷಗಳ ಅವಧಿಯಲ್ಲಿ ಕಾರ್ಕಳ ಪುರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಎಲ್ಲರನ್ನೂ ಶುಭದ್ ರಾವ್ ಪರವಾಗಿ ನೆನಪಿನ ಕಾಣಿಕೆಗಳನ್ನು ಕೊಟ್ಟು ಗೌರವಿಸಿದರು. ಅದೇ ಸಂದರ್ಭದಲ್ಲಿ ಕಾರ್ಕಳ ಪುರಸಭೆಯ ಮೂರು ಅವಧಿಯ ಎಲ್ಲ ಪುರಸಭೆಯ ಸದಸ್ಯರನ್ನು, ಎಲ್ಲ ಖಾಯಂ ಮತ್ತು ತಾತ್ಕಾಲಿಕ ನೌಕರರನ್ನು ಸನ್ಮಾನಿಸಿದರು.

ಶಗುನ್ ವರ್ಮಾ ಹೆಗ್ಡೆ ಅವರಿಗೆ ಸನ್ಮಾನ.

ಇದೇ ಸಂದರ್ಭದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿ ಭಾರತದ ಅಂಡರ್ 15 ವಾಲಿಬಾಲ್ ತಂಡದ ಕ್ಯಾಪ್ಟನ್ ಆಗಿ ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ ಶಗುನ್ ವರ್ಮಾ ಎಸ್ ಹೆಗ್ಡೆ ಅವರನ್ನು ಮಂಜುನಾಥ್ ಭಂಡಾರಿಯವರು ಸನ್ಮಾನಿಸಿ ಅಭಿನಂದನೆ ಮಾಡಿದರು. ಕಾರ್ಕಳದ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯಕುಮಾರ್ ಶೆಟ್ಟಿಯವರು ಮಾತನಾಡಿ ರಾಜಕೀಯ ವ್ಯಕ್ತಿಗಳಿಗೆ ನಿವೃತ್ತಿ ಎಂಬುದು ಇಲ್ಲ. ಶುಭದ್ ರಾವ್ ಅವರು ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಪಕ್ಷವನ್ನು ಬೆಳೆಸುತ್ತಿದ್ದಾರೆ. ಅವರಿಗೆ ಅಭಿನಂದನೆ ಎಂದರು. ಕರ್ನಾಟಕ ರಾಜ್ಯದ ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ 18 ವರ್ಷ ಪುರಸಭೆಯ ಸದಸ್ಯರಾಗಿ ಶುಭದ್ ಅವರು ಪಕ್ಷಾತೀತವಾಗಿ ಮಾಡಿದ ಸೇವೆಯು ಒಂದು ಅತ್ಯುತ್ತಮ ಮಾದರಿ ಎಂದರು. ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ್ ಕೋಟ್ಯಾನ್, ಕೊಲ್ಲೂರು ದೇವಸ್ಥಾನದ ಟ್ರಸ್ಟೀ ಸುರೇಂದ್ರ ಶೆಟ್ಟಿ ಮತ್ತು ಕಾರ್ಕಳ ಜ್ಞಾನಸುಧಾ ಕಾಲೇಜಿನ ಸ್ಥಾಪಕರಾದ ಡಾ.ಸುಧಾಕರ್ ಶೆಟ್ಟಿಯವರು ಅತಿಥಿಗಳಾಗಿದ್ದು ಶುಭದ್ ಅವರನ್ನು ಅಭಿನಂದಿಸಿದರು. ಪುರಸಭೆಯ ಸದಸ್ಯರ ಪರವಾಗಿ ಅಷ್ಪಾಕ್ ಅಹಮದ್ ಅವರು ಶುಭಾಶಂಸನೆ ಮಾಡಿದರು.

ಕಾರ್ಕಳದ ನಾಗರಿಕರಿಗೆ ಅಭಿನಂದನೆ – ಶುಭದ್ ರಾವ್

ಶುಭದ ರಾವ್ ಅವರು ಸ್ವಾಗತ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಇದು ನನ್ನ ಅಭಿನಂದನಾ ಕಾರ್ಯಕ್ರಮವಲ್ಲ. ಅಹಂಕಾರದ ಪ್ರದರ್ಶನವೂ ಅಲ್ಲ. ನನಗೆ ಮೂರು ಪೂರ್ಣ ಅವಧಿಗೆ ಪುರಸಭೆಯ ಸದಸ್ಯನಾಗಿ ದುಡಿಯಲು ಆಶೀರ್ವಾದ ಮಾಡಿದ ಎಲ್ಲ ನಾಗರಿಕರಿಗೆ ಪಕ್ಷಾತೀತವಾಗಿ ಕೃತಜ್ಞತೆ ಅರ್ಪಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಎಸ್ ವಿ ಟಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಮಿತ್ರಪ್ರಭಾ ಹೆಗ್ಡೆ, ಉದ್ಯಮಿ ಜಾನ್ ಡಿಸಿಲ್ವ, ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಶಿಲ್ಪಿ ರಾಮಚಂದ್ರ ಆಚಾರ್ಯ, ಶುಭದ್ ಅವರ ಪತ್ನಿ ದಿವ್ಯಾ ರಾವ್, ಸಿವಿಲ್ ಇಂಜಿನಿಯರ್ ನವೀನ್ ರಾವ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೇಂದ್ರ ಭಟ್ ಕೆ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ನೀಡಿದರು. ಕಾರ್ಯಕ್ರಮದ ನಂತರ ಶ್ರೇಷ್ಠ ಕಲಾವಿದರಿಂದ ವಿಶೇಷವಾದ ನೃತ್ಯ ಮತ್ತು ಸಂಗೀತವನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಮವು ಜರಗಿತು.

ವರದಿ: ಅರುಣ ಭಟ್ ಕಾರ್ಕಳ

About The Author

error: Content is protected !!