ಭಟ್ಕಳ: ಭಟ್ಕಳ ಉತ್ಸವವು ನಿಜಾರ್ಥದಲ್ಲಿ ಜನರ ಉತ್ಸವವಾಗಬೇಕು. ಇಂತಹ ಉತ್ಸವಗಳು ಸ್ಥಳೀಯ ಬಡ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ವೇದಿಕೆಯಾಗಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಅವರು ಭಟ್ಕಳ ಕ್ರೀಯಾಶೀಲ ಗೆಳೆಯರ ಸಂಘದ ಆಶ್ರಯದಲ್ಲಿ ವೆಂಕಟಾಪುರದಲ್ಲಿ ಆಯೋಜಿಸಲಾದ ಭಟ್ಕಳ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. “ಉತ್ಸವ ಎಂದರೆ ಲಾಭ–ನಷ್ಟದ ಲೆಕ್ಕಾಚಾರವಲ್ಲ. ಜನತೆಗೆ ಮನರಂಜನೆ ನೀಡುವುದರ ಜೊತೆಗೆ ವ್ಯಾಪಾರಿಗಳಿಗೆ ಸಹ ಲಾಭವಾಗುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ನಡೆಯುತ್ತವೆ. ರೈತರು, ಮೀನುಗಾರರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಒಂದೇ ವೇದಿಕೆಯಲ್ಲಿ ಮನೋರಂಜನೆ ಸಿಗುವಂತ ಕಾರ್ಯಕ್ರಮಗಳು ಅಗತ್ಯ. ಕಲೆ–ಸಂಸ್ಕೃತಿಯನ್ನು ಬೆಳೆಸಿ ಮುಂದಿನ ತಲೆಮಾರಿಗೆ ಉಳಿಸುವ ಕೆಲಸವಾಗಬೇಕು. ಎಲ್ಲರೂ ಸಂತೋಷವಾಗಿರಬೇಕು, ಎಲ್ಲರಿಗೂ ವೇದಿಕೆ ಸಿಗಬೇಕು. ನಾಲ್ಕು ದಿನಗಳ ಈ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು” ಕರೆ ನೀಡಿದರು.
ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ಭಟ್ಕಳದ ಮುಂದಿನ ಭವಿಷ್ಯದಲ್ಲಿ ಸೌಹಾರ್ದತೆ ಹಾಗೂ ಜನರ ಏಕತೆಯ ಬುನಾದಿಯಾಗಿ ಈ ಉತ್ಸವ ರೂಪುಗೊಳ್ಳಲಿದೆ ಎಂದರು. ಸಂಘಟನೆ ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ. ಸುಮಾರು 15 ವರ್ಷಗಳ ಹಿಂದೆ ನಡೆದ ಭಟ್ಕಳ ಉತ್ಸವಕ್ಕಿಂತಲೂ ಈ ಬಾರಿ ವಿಶಾಲ ಪ್ರಮಾಣದಲ್ಲಿ ಆಯೋಜನೆ ಮಾಡಲಾಗಿದೆ. ಕ್ರೀಯಾಶೀಲ ಗೆಳೆಯರ ಸಂಘವು ಉತ್ಸವಗಳಿಗೆ ಮಾತ್ರ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯರಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ, ಟ್ಕಳ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಅಳ್ವೇಕೋಡಿ ಮಾರಿಜಾತ್ರೆ ಅಧ್ಯಕ್ಷ ರಾಮಾ ಮೊಗೇರ, ಗೊಂಡ ಸಮಾಜದ ಪ್ರಮುಖ ಸೋಮಯ್ಯ ಗೊಂಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್, ಭಟ್ಕಳ ಉತ್ಸವದ ಗೌರವ ಅಧ್ಯಕ್ಷ ವೆಂಕಟೇಶ ನಾಯ್ಕ ಶಿರಾಲಿ, ಭಟ್ಕಳ ಕ್ರೀಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ರಮೇಶ್ ಖಾರ್ವಿ, ಉತ್ಸವ ಸಂಚಾಲಕ ಶ್ರೀಕಾಂತ ನಾಯ್ಕ ಆಸರಕೇರಿ, ದೇವಾಡಿಗ ಸಮಾಜದ ಅಧ್ಯಕ್ಷ ಲಕ್ಷ್ಮಣ ಕೋಟದಮಕ್ಕಿ, ಬಿಜೆಪಿ ಪ್ರಮುಖ ಸುಬ್ರಾಯ ದೇವಾಡಿಗ ಸೇರಿದಂತೆ ಹಲವರು ಮಾತನಾಡಿದರು. ಸಂಘದ ಸ್ಥಾಪಕ ಅಧ್ಯಕ್ಷ ಭಾಸ್ಕರ್ ನಾಯ್ಕ ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ