ಭಟ್ಕಳ: ತಾಲ್ಲೂಕಿನ ಪುರವರ್ಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಸಾರ್ವಜನಿಕರ ಗಮನ ಸೆಳೆದಿತು. ತರಕಾರಿಗಳು, ಹಣ್ಣುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಆತ್ಮವಿಶ್ವಾಸ ಹಾಗೂ ಸಂವಹನ ಕೌಶಲ್ಯ ನೈಜ ವಾರದ ಸಂತೆಯನ್ನೇ ನೆನಪಿಸುವಂತಿತ್ತು.
ಶಾಲಾ ಮೈದಾನದಲ್ಲಿ ನಡೆದ ಮಕ್ಕಳ ಸಂತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಚಾಲನೆ ನೀಡಿದರು. ಮಕ್ಕಳಿಗೆ ವ್ಯಾವಹಾರಿಕ ಜ್ಞಾನ, ಲೆಕ್ಕಾಚಾರ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಕೌಶಲ್ಯ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂತೆಯಲ್ಲಿ ವಿದ್ಯಾರ್ಥಿಗಳು ಸ್ಥಳೀಯವಾಗಿ ದೊರಕುವ ತರಕಾರಿಗಳು, ಹಣ್ಣುಗಳು, ಸೊಪ್ಪುಗಳು, ಧಾನ್ಯಗಳು, ಮನೆಯಲ್ಲೇ ತಯಾರಿಸಿದ ತಿಂಡಿ–ತಿನಿಸುಗಳು, ಜ್ಯೂಸ್, ಮಜ್ಜಿಗೆ ಸೇರಿದಂತೆ ವಿವಿಧ ವಸ್ತುಗಳನ್ನು ಉತ್ಸಾಹದಿಂದ ಮಾರಾಟ ಮಾಡಿದರು. ಮಾರಾಟದ ಮೂಲಕ ಲಾಭ–ನಷ್ಟದ ಅರಿವು ಪಡೆದು ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸುವ ಅನುಭವ ಗಳಿಸಿದರು.
ಜಂಕ್ ಫುಡ್ ಮಾರಾಟಕ್ಕೆ ಅವಕಾಶ ನೀಡಲಾಗಿರಲಿಲ್ಲ ಎಂಬುದು ವಿಶೇಷ.
ಮಕ್ಕಳ ಪಾಲಕರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತೆಗೆ ಆಗಮಿಸಿ ಮಕ್ಕಳಿಂದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು.
ಕೇವಲ ಕುತೂಹಲಕ್ಕೆ ಬಂದ ಹಲವರು ಮಕ್ಕಳೊಂದಿಗೆ ಚರ್ಚಿಸಿ ವ್ಯಾಪಾರ ನಡೆಸಿದ ದೃಶ್ಯಗಳು ಸಂತೆಗೆ ಮತ್ತಷ್ಟು ಮೆರುಗು ತಂದವು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ, ಇಂತಹ ಚಟುವಟಿಕೆಗಳು ಮಕ್ಕಳ ಆತ್ಮವಿಶ್ವಾಸ ಹಾಗೂ ಜೀವನ ಕೌಶಲ್ಯ ವಿಕಾಸಕ್ಕೆ ನೆರವಾಗುತ್ತವೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಎ. ಮಾತನಾಡಿ, ಪಠ್ಯ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಮಕ್ಕಳ ಬೌದ್ಧಿಕ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ವ್ಯವಹಾರ ಜ್ಞಾನ ಹೆಚ್ಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಆರ್ ಪಿ ವಿಜಯ ಬಾಳಿಗಿ,ಸೇರಿದಂತೆ
ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪಾಲಕರು ಹಲವರು ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ