ಹೊನ್ನಾವರ: ಪತ್ರಿಕೆಯನ್ನು ಕೊಂಡು ಓದುವ ಮೂಲಕ ಪತ್ರಿಕೆಯನ್ನು ಉಳಿಸುವ ಗುರುತರವಾದ ಜವಬ್ದಾರಿ ಸಾರ್ವಜನಿಕರ ಮೇಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ಅಡಿ ತಿಳಿಸಿದರು.
ಪಟ್ಟಣದ ಸೊಶಿಯಲ್ ಕ್ಲಬ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ ೨೦೨೬ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಅಂಕು ಡೊಂಕು ಬರೆಯುವ ಪತ್ರಕರ್ತರ ಸ್ಥಿತಿಯನ್ನು ಸಾರ್ವಜನಿಕರು ಅರಿತುಕೊಳ್ಳಬೇಕು. ಪತ್ರಿಕೆಯಲ್ಲಿ ಸುದ್ದಿ ಬಿತ್ತರವಾದಾಗ ಸಮಾಜ ಅದನ್ನು ಬೆಂಬಲಿಸುವ ಕಾರ್ಯವಾಗಬೇಕು. ತಾಲೂಕಿನ ಪತ್ರಕರ್ತರು ಕ್ರೀಯಾಶೀಲವಾಗಿದ್ದು, ಸಮಸ್ಯೆಗೆ ಸ್ಪಂದಿಸಿ ವ್ಯವಸ್ಥಿತವಾಗಿ ನ್ಯಾಯ ದೊರೆಯುವಂತೆ ಹೋರಾಟ ನಡೆಸಿದವರು ಈ ನೆಲದಲ್ಲಿರುವುದು ವಿಶೇಷವಾಗಿದೆ ಎಂದರು.
ಕ್ಯಾಲೆಂಡರ್ ಬಿಡುಗಡೆಗೊಳಿಸಿದ ತಹಶೀಲ್ದಾರ ಪ್ರವೀಣ ಕರಾಂಡೆ ಮಾತನಾಡಿ ತಾಲೂಕಿನ ಪತ್ರಕರ್ತರು ಸರ್ಕಾರದ ಹಲವು ಯೋಜನೆಯನ್ನು ಸಾರ್ವಜನಿಕರಿಗೆ ತಿಳಿಸಲು ಪ್ರಮುಖ ಪಾತ್ರ ವಹಿಸುತ್ತಾರೆ. ತಾಲೂಕಿನ ಪ್ರವಾಸೊದ್ಯಮ ಅಭಿವೃದ್ದಿ, ಹಲವು ಸಮಸ್ಯೆಗಳನ್ನು ಬಗೆಹರಿಸಲು ಪತ್ರಿಕೆಗಳ ಪಾತ್ರವು ಇದೆ. ಇಲಾಖಾವಾರು ವರದಿ ಮಾಡುವಾಗ ಅಧಿಕಾರಿಗಳಿಂದ ಆ ವಿಷಯದಲ್ಲಿ ಮಾಹಿತಿ ಪಡೆದಾಗ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದರು.
ಪ.ಪಂ ಮುಖ್ಯಾಧಿಕಾರಿ ಏಸು ಸುಬ್ಬಣ್ಣ ಬೆಂಗಳೂರು ಮಾತನಾಡಿ, ಇತ್ತೀಚಿನ ದಿನದಲ್ಲಿ ನಾವೆಲ್ಲರೂ ಮೊಬೈಲ್ ದಾಸರಾಗಿ ಪತ್ರಿಕೆ ಓದುವುದರಿಂದ ದೂರವಾಗುತ್ತಿದ್ದೇವೆ. ತಾಲೂಕಿನಲ್ಲಿ ಸಮಾಜಮುಖಿ ವರದಿ ಮೂಲಕ ಪತ್ರಕರ್ತರು ಜನಾನುರಾಗಿಯಾಗಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ವಿಠ್ಠಲದಾಸ ಕಾಮತ್ ಮಾತನಾಡಿ ಪತ್ರಕರ್ತರು ವರ್ಷವಿಡಿ ಸುದ್ದಿ ಮಾಡುವ ಜೊತೆ, ಈ ದಿನ ವಿನೂತನವಾಗಿ ಕ್ಯಾಲೆಂಡರ್ ಬಿಡುಗಡೆಯ ದಿನದಲ್ಲಿ “ಉಚಿತ ನೇತ್ರ ತಪಾಸಣೆ ಜೊತೆ ಶಸ್ತ್ರಚಿಕಿತ್ಸಾ ಶಿಬಿರ” ಆಯೋಜಿಸುವ ಮೂಲಕ ಮಾದರಿಯಾಗಿದ್ದಾರೆ. ಆರೋಗ್ಯದ ಕಡೆ ಪ್ರತಿಯೊರ್ವರು ವಿಶೇಷ ಕಾಳಜಿ ವಹಿಸಬೇಕಿದ್ದು, ಆ ನಿಟ್ಟಿನಲ್ಲಿ ಸಂಘಟನೆಯು ಮುನ್ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ ಜಿಲ್ಲೆಯಲ್ಲಿಯೇ ಹೊನ್ನಾವರದ ಪತ್ರಕರ್ತರ ಸಂಘ ಕ್ರಿಯಾಶೀಲ ಸಂಘವಾಗಿದೆ. ಪತ್ರಕರ್ತರು ಎಲ್ಲರೂ ಪ್ರಾಮಾಣಿಕ ಕೆಲಸದ ಮೂಲಕ ಜನಮನ ಸೆಳೆಯೋಣ. ಪ್ರಸಕ್ತ ಸಾಲಿನಲ್ಲಿ ವರ್ಷವಿಡೀ ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘದ ಅಧ್ಯಕ್ಷ ವಿನಾಯಕ ಮೇಸ್ತ ಮಾತನಾಡಿ ಪತ್ರಕರ್ತರಿಗೆ ಅನಾರೊಗ್ಯ ಸಮಸ್ಯೆ ಆದಾಗ ಸಂಘದಿಂದ ನೆರವಾಗಲು ಕ್ಷೇಮನಿಧಿ ಆರಂಭಿಸಿದ್ದು, ಈ ದಿನ ಬಿಡುಗಡೆಯಾದ ಕ್ಯಾಲೆಂಡರನಲ್ಲಿಯೂ ಜಾಹೀರಾತು ಮೂಲಕ ಹಣವನ್ನು ಇದಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು
ಜಿಲ್ಲಾ ಸಂಘದ ಸದಸ್ಯ ಸತೀಶ ತಾಂಡೇಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ದಿನೇಶ ಹೆಗಡೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ವಂದಿಸಿದರು. ಕಾರ್ಯದರ್ಶಿ ಪ್ರಸಾದ ಹೆಗಡೆ ಕಾರ್ಯಕ್ರಮ ನಿರ್ವಹಿಸಿದ್ದರು. ಸಂಘದ ಸದಸ್ಯರು, ವಿವಿಧ ಸಂಘಟನೆಯ ಪ್ರಮುಖರು, ಸಾರ್ವಜನಿಕರು ಭಾಗವಹಿಸಿದ್ದರು.
ಮಧ್ಯಾಹ್ನ ಕುಮಟಾದ ನಮಸ್ಕಾರ ಸಮಾಜ ಸೇವಾ ಸಂಸ್ಥೆ ಮತ್ತು ಬೆಳಕು ನೇತ್ರಾಲಯದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

More Stories
ಭಟ್ಕಳದ ಕರಿಕಲ್ಲಿನಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಹಾಗೂ ರಾಮತಾರಕ ಮಹಾಯಜ್ಞ
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’