ಭಟ್ಕಳ :ವಿದುಷಿ ಧನಲಕ್ಷ್ಮೀ ಮೊಗೇರ
ಭಟ್ಕಳ ತಾಲೂಕಿನ ಶಿರಾಲಿ ನಿವಾಸಿಯಾಗಿರುವ ಶ್ರೀಮತಿ ಶಾರದಾ ಹಾಗೂ ಶ್ರೀ ರಾಮಚಂದ್ರ ಮೊಗೇರ ಇವರ ಮಗಳು. ಈಕೆ ತನ್ನ ನಾಲ್ಕನೇ ವಯಸ್ಸಿನಿಂದಲೇ ಭರತನಾಟ್ಯವನ್ನು ಕಲಿಯಲು ಆರಂಭಿಸಿದಳು. ಝೇಂಕಾರ್ ಕಲಾ ಸಂಸ್ಥೆಯಲ್ಲಿ ನೃತ್ಯ ಮತ್ತು ಸಂಗೀತ ಶಿಕ್ಷಣ ಪಡೆಯುತ್ತಾ ಜೂನಿಯರ್ ಹಂತವನ್ನು ವಿದುಷಿ ನಮೃತಾ ತಿಲಕ್ ರಾವ್ ಇವರಲ್ಲಿ ಅಭ್ಯಸಿಸಿ, ಸೀನಿಯರ್ ಹಾಗೂ ವಿದ್ವತ್ ಹಂತವನ್ನು ವಿದುಷಿ ನಯನಾ ಪ್ರಸನ್ನ ಪ್ರಭು ಇವರಲ್ಲಿ ಪೂರ್ಣಗೊಳಿಸಿದ್ದಾಳೆ. ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮುಂಬೈ ಇವರು ನಡೆಸುವ ವಿಶಾರದ, ಅಲಂಕಾರ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ದಿ|| ಶ್ರೀ ವೆಂಕಟೇಶ ಭಟ್ ಇವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿ ಜೂನಿಯರ್ ಹಂತವನ್ನು ಪೂರ್ಣಗೊಳಿಸಿರುತ್ತಾಳೆ.



ಓದಿನಲ್ಲಿಯೂ ಸದಾ ಮುಂದಿದ್ದ ಈಕೆ ಎಸ್. ಎಸ್. ಎಲ್. ಸಿ. ಯಲ್ಲಿ ತಾಲೂಕಿಗೆ 9ನೇ ಸ್ಥಾನ, ಪಿ.ಯು.ಸಿ.ಯಲ್ಲಿ ತಾಲೂಕಿಗೆ ಪ್ರಥಮ, ಬಿ.ಎಸ್ಸಿ.ಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ರಾಂಕ್ ಪಡೆದಿರುತ್ತಾಳೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಕೆ.ಸೆಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣಳಾಗಿದ್ದಾಳೆ.
ಬಾಲ್ಯದಿಂದಲೂ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿರುವ ಧನಲಕ್ಷ್ಮಿ ಭಗವಂತನ ಅನುಗ್ರಹ, ಗುರುಗಳ ಮಾರ್ಗದರ್ಶನ, ತಂದೆ ತಾಯಿಯ ಪ್ರೋತ್ಸಾಹ, ತನ್ನ ಶ್ರದ್ದೆ ಹಾಗೂ ಸತತ ಪರಿಶ್ರಮದಿಂದ ರಂಗಪ್ರವೇಶಕ್ಕೆ ಸಿದ್ಧಳಾಗಿದ್ದಾಳೆ.
ನೀಡಿದ ಕಾರ್ಯಕ್ರಮಗಳು ಹಾಗೂ ಸಾಧನೆಗಳು:
2017ರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದಾಳೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದಿರುತ್ತಾಳೆ. ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ, ಅಲಂಕಾರ್ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತೃತೀಯ ಸ್ಥಾನ ಪಡೆದಿರುತ್ತಾಳೆ.



2022ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಕೆನರಾ ಪ್ಲಸ್ ವಾಹಿನಿಯು ನಡೆಸಿದ ಜಿಲ್ಲಾ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಕರಾವಳಿ ಉತ್ಸವ, ಯುಗಾದಿ ಉತ್ಸವ, ಉಡುಪಿಯ ರಾಜಾಂಗಣ, ಭಟ್ಕಳ, ಹೊನ್ನಾವರ, ಕುಮಟಾ, ಕಾರವಾರ, ಮುಂಡಗೋಡ, ದಾಂಡೇಲಿ, ಗದಗ ಮುಂತಾದ ಹಲವೆಡೆ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾಳೆ.
ಇವಳ ರಂಗಪ್ರವೇಶ ಕಾರ್ಯಕ್ರಮವು ಜನವರಿ 31ರಂದು ಭಟ್ಕಳದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಸಂಜೆ 5ರಿಂದ ಜರುಗಲಿದೆ.



ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ‘ಕಲಾಸು ಜಯ’ ಸಂಸ್ಥೆ, ಹುಬ್ಬಳ್ಳಿ ಇದರ ಸಂಸ್ಥಾಪಕರಾದ ವಿದ್ವಾನ್ ಸುಜಯ್ ಶಾನಭಾಗ ಆಗಮಿಸಲಿದ್ದಾರೆ. ಹಾಡುಗಾರಿಕೆಯಲ್ಲಿ ವಿದ್ವಾನ್ ರಾಜೀವ್ ರಾಜಗೋಪಾಲನ್, ಬೆಂಗಳೂರು; ನಟುವಾಂಗದಲ್ಲಿ ವಿದುಷಿ ನಯನ ಪ್ರಸನ್ನ, ಭಟ್ಕಳ; ಮೃದಂಗದಲ್ಲಿ ವಿದ್ವಾನ್ ಲಕ್ಷ್ಮೀನಾರಾಯಣ, ಬೆಂಗಳೂರು; ಕೊಳಲಿನಲ್ಲಿ ವಿದ್ವಾನ್ ದೀಪಕ್ ಹೆಬ್ಬಾರ್, ಬೆಂಗಳೂರು; ರಿದಂ ಪ್ಯಾಡ್ ನಲ್ಲಿ ವಿದ್ವಾನ್ ರಾಘವೇಂದ್ರ ರಂಗಧೋಳ್, ಶಿವಮೊಗ್ಗ ಇವರು ಭಾಗವಹಿಸಲಿದ್ದಾರೆ. ವಿದುಷಿ ಪಲ್ಲವಿ ಗಾಯತ್ರಿ, ಬೆಂಗಳೂರು ಇವರು ನಿರೂಪಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಈಕೆಯ ತಂದೆ-ತಾಯಿ, ಗುರುಗಳು, ಕುಟುಂಬದವರು, ಝೇಂಕಾರ್ ಕಲಾ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಶುಭ ಹಾರೈಸಿದ್ದಾರೆ.



More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ