March 4, 2026

ಅಶೋಕ ಶಂಕರ ಭಟ್ಟ ಇವರಿಗೆ ಸಾಧಕ” ಸನ್ಮಾನ

ಭಟ್ಕಳ: ಶ್ರೀಕ್ಷೇತ್ರ ಕಿತ್ರೆ ದೇವಿಮನೆಯಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಸಮಾಜದ ಸಾಧಕರಾದ ಅಶೋಕ ಶಂಕರ ಭಟ್ಟ ಇವರಿಗೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ “ಸಾಧಕ” ಸನ್ಮಾನ ಕಾರ್ಯಕ್ರಮ ಜ.೨೭ರಂದು ನಡೆಯುವ ಧರ್ಮಸಭೆಯಲ್ಲಿ ನಡೆಯಲಿದೆ ಎಂದು ಶ್ರೀ ಕ್ಷೇತ್ರ ದೇವಿಮನೆಯ ಆಡಳಿತ ಸಮಿತಿ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರ ತಿಳಿಸಿದ್ದಾರೆ.


ಅನೇಕ ಸಾಧನೆಗಳನ್ನು ಮಾಡಿದ, ಸಮುದಾಯಕ್ಕೆ, ಸಮಾಜಕ್ಕೆ ಅನನ್ಯ ಕೊಡುಗೆಗಳನ್ನು ನೀಡಿದ ಸಾಧಕ ಅಶೋಕ ಶಂಕರ ಭಟ್ಟ ಇವರು ಮೂಲತಃ ಕುಂದಾಪುರ ತಾಲೂಕಿನ ಚಿಕ್ಕಳ್ಳಿ ಕುಟುಂಬವರು. ತಮ್ಮ ಬಾಲ್ಯವನ್ನು ಭಟ್ಕಳ ತಾಲೂಕಿನ ಹದ್ಲೂರಿನಲ್ಲಿ ಕಳೆದರು. ಕೋಣಾರಿನ ಗಣಾಮಂದಿಯಲ್ಲಿದ್ದು ಕೋಣಾರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಮಾರುಕೇರಿಯ ಸಶಿವಶಾಂತಿಕಾ ಪರಮೇಶ್ವರೀ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ತಮ್ಮ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಗಂಗೊಳ್ಳಿ ಎಸ್.ವಿ. ಜ್ಯೂನಿಯರ್ ಕಾಲೇಜಿನಲ್ಲಿ ಹಾಗೂ ಪಾಲಿಟೆಕ್ನಿಕ್ ಶಿಕ್ಷಣವನ್ನು ಸಾಗರದಲ್ಲಿ ಮುಗಿಸಿದರು. ೧೯೯೦ರಿಂದ ೧೯೯೪ರ ವರೆಗೆ ಬೆಂಗಳೂರಿನ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡಿದ ಇವರು ಭಾಸ್ಕರ ಶರ್ಮಾ ಅವರೊಡನೆ ೧೯೯೪ರಲ್ಲಿ ಬಿಸಿನೀರ್ ಇಂಡಿಯಾ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗದಾತರಾದರು. ಈ ಭಾಗದ ಹಲವಾರು ಕುಟುಂಬಗಳಿಗೆ ಮತ್ತು ವಿದ್ಯಾ ಸಂಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುತ್ತಿರುವ ಇವರು ಈ ಭಾಗದಲ್ಲಿ ಸಮಾಜದ ಜನ ಮಾನಸದಲ್ಲಿ ನೆಲೆಸಿದ್ದಾರೆ. ಬಿಸಿನೀರ್ ಸಂಸ್ಥೆಯು ಗೂಗಲ್, ಮೈಕ್ರೋಸಾಪ್ಟ, ಆಪಲ್, ಇನ್ಫೋಸಿಸ್, ಬಯೋಕಾನ್, ಟಯೋಟಾ, ಕಿರ್ಲೋಸ್ಕರ್, ಹೀರೋ ಮೋಟಾರ್ಸ್ ಸೇರಿದಂತೆ ಹಲವಾರು ಪ್ರತಿಷ್ಟಿತ ಹೋಟೆಲ್, ಆಸ್ಪತ್ರೆಗಳು ಸೇರಿದಂತೆ ಅನೇಕ ಪ್ರತಿಷ್ಟಿತ ಗ್ರಾಹಕರನ್ನು ಹೊಂದಿದೆ. ಕಳೆದ ೩ ವರ್ಷಗಳಿಂದ ಬೆಂಗಳೂರಿನ ಕೆಂಗೇರಿಯಲ್ಲಿ ಶ್ರೀಮಾತಾ ಕಿಚನ್ ಎಂಬ ಹೊಟೆಲ್‌ನ್ನು ಸ್ಥಾಪಿಸಿ ಮುನ್ನೆಡೆಸುತ್ತಿದ್ದಾರೆ. ಇವರನ್ನು ಬೆಂಗಳೂರಿನ “ಸಾಗರ ಸಂಗಮ” ಸಂಸ್ಥೆ, ವಿಶ್ವಹವ್ಯಕ ಸಮ್ಮೇಳನದಲ್ಲಿ “ಸ್ಪೂರ್ತಿರತ್ನ” ಪುರಸ್ಕಾರ, ಶ್ರೀರಾಮಚಂದ್ರಾಪುರಮಠ ಗೋಕರ್ಣದ ಅಶೋಕೆಯಲ್ಲಿ “ಸಮಾಜ ಸೇವಾತಿಲಕ” ಪುರಸ್ಕಾರ ಸೇರಿದಂತೆ ಹಲವಾರು ಸಂಘ, ಸಂಸ್ಥೆಗಳು ಪುರಸ್ಕರಿಸುವುದನ್ನು ಇಲ್ಲಿ ಸ್ಮರಿಸಬಹುದು.

About The Author

error: Content is protected !!