March 2, 2026

ಸಂಗೀತವು ಸಮುದ್ರವಿದ್ದಂತೆ  -ಶಂಭು ಭಟ್

ಹೊನ್ನಾವರ :ಸಂಗೀತವು ಆಳವಾದ ಸಮುದ್ರವಿದ್ದಂತೆ. ನಮಗೆ ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ಪಡೆಯಬಹುದು. ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ತೊಡಗಿಸಿಕೊಂಡಾಗ ಕಲಾದೇವಿ ಒಲಿಯುತ್ತಾಳೆ ಎಂದು ಕರ್ನಾಟಕ ಕಲಾಶ್ರೀ ಪುರಸ್ಕೃತ ಹಿರಿಯ ಕಲಾವಿದ ಪ್ರೊ. ಶಂಭು ಭಟ್ ಕಡತೋಕಾ ಹೇಳಿದರು.

ಅವರು ತಾಲೂಕಿನ ಖರ್ವಾದ ಸೀತಾರಾಮ ವೇದಿಕೆಯಲ್ಲಿ ನಡೆದ 7ನೇ ವರ್ಷದ ಸ್ವರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
    
ಸಂಗೀತವನ್ನು ಬೆಳೆಸಲು ಕಲಾವಿದರು ಬೇಕು. ಸಂಗೀತವನ್ನು ಉಳಿಸಲು ಶೋತೃಗಣ ಬೇಕು. ರಮೇಶ್ ರಾವ್ ಅವರ ಮನೆಯ ಅಂಗಳದಲ್ಲಿ ಸೇರಿದ ಜನಸ್ತೋಮ ಕಂಡಾಗ ಸಂತಸವಾಗುತ್ತದೆ. ಸ್ವರಶ್ರೀ ಸಂಗೀತ ಶಾಲೆಯ ಶಿಕ್ಷಕರಾದ ಗುರುರಾಜ್ ಆಡುಕಳ ಮತ್ತು ಶ್ರೀಲತಾ ಗುರುರಾಜ್ ದಂಪತಿಗಳು ತಾಲೂಕಿನ ತುಂಬಾ ಸಂಗೀತದ ಆಸಕ್ತಿ ಪಸರಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ವಿಷ್ಣು ಹೆಗಡೆ, ರಮೇಶ್ ರಾವ್, ಸುರೇಶ್ ಹೆಗಡೆ,ಎಂ.ಎಸ್. ಹೆಗಡೆ, ರವಿ ಹೆಗಡೆ, ನಾಗೇಶ ಮಧ್ಯಸ್ಥ, ಸಂಹಿತ್ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿಗೆ ನಮ್ಮನ್ನು ಅಗಲಿದ ಡಾ. ಅಶೋಕ ಹುಗ್ಗಣ್ಣವರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ನಂತರ ಸ್ವರಶ್ರೀ ಸಂಗೀತ ಶಾಲೆಯಲ್ಲಿ ಗಾಯನ ಮತ್ತು ವಾದನ ತರಬೇತಿ ಪಡೆಯುತ್ತಿರುವ ಸುಮಾರು 144 ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ತದನಂತರ ಶ್ರೀಲತಾ ಗುರುರಾಜ, ವಿದುಷಿ ವಸುಧಾ ಶರ್ಮ, ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರು ಹಾಡಿ ಪ್ರೇಕ್ಷಕರ ಮನಸೂರೆಗೊಂಡರು. ಅಕ್ಷಯ್ ಭಟ್, ಗುರುರಾಜ್ ಆಡುಕಳ, ಪಂ. ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಸಮರ್ಥವಾಗಿ ತಬಲಾಸಾಥ್ ನೀಡಿದರೆ, ಭರತ್ ಹೆಗಡೆ ಹೆಬ್ಬಲ್ಸು ಸಂವಾದಿನಿ ಸಾಥ್ ನೀಡಿ ಸೈ ಎನಿಸಿಕೊಂಡರು.

ಹಾರ್ಮೋನಿಯಂ ಸೋಲೋದಲ್ಲಿ ಮನೋಜ ಭಟ್ಟ, ಕಡೇಹಳ್ಳ ಎಲ್ಲರ ಮೆಚ್ಚುಗೆ ಪಡೆದರು. ಪ್ರಶಾಂತ್ ಮೂಡಲಮನೆ ಕಾರ್ಯಕ್ರಮದ ನುಡಿ ತಂತುವಾಗಿ ಸಹಕರಿಸಿದರು.

About The Author

error: Content is protected !!