March 2, 2026

ಹೊನ್ನಾವರ ತಾಲೂಕು ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ

ಹೊನ್ನಾವರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ತಾಲೂಕಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ಸುರೇಶ ನಾಯ್ಕ ಸರ್ವಾಧ್ಯಕ್ಷತೆಯಲ್ಲಿ ತಾಲೂಕಿನ ಅರೆಅಂಗಡಿಯ ಎಸ್‌ಎಸ್‌ಎಸ್‌ಕೆಪಿ ಶಾಲೆಯ ಆವರಣದಲ್ಲಿ ಫೆ. ೧೪ ರಂದು ನಡೆಯಲಿದೆ. ಸಮ್ಮೇಳನ ಯಶಸ್ವಿಯಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್.ಗೌಡ ಹೇಳಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು ಬೆಳಗ್ಗೆ ೮-೩೦ ಗಂಟೆಗೆ ಧ್ವಜಾರೋಹಣ ನಡೆಯಲಿದೆ. ತಹಸೀಲ್ದಾರ ಪ್ರವೀಣ ಕರಾಂಡೆ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಪರಿಷತ್ತಿನ ಧ್ವಜಾರೋಹಣ, ತಾಲೂಕು ಅಧ್ಯಕ್ಷ ಎಸ್.ಎಚ್.ಗೌಡ ನಾಡ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ ೯ ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿ.ಪಂ.ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕ ಚಾಲನೆ ನೀಡುವರು.


ಬೆಳಗ್ಗೆ ೧೦ ಗಂಟೆಗೆ ಸಮ್ಮೇಳನವನ್ನು ಸಾಹಿತಿ ಡಾ. ವಸಂತಕುಮಾರ ಪೆರ್ಲ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಶಯ ಮಾತನಾಡುವರು. ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪುಸ್ತಕ ಬಿಡುಗಡೆಗೊಳಿಸುವರು. ಶಾಸಕ ದಿನಕರ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸುವರು. ಗ್ರಾ,ಪಂ.ಅಧ್ಯಕ್ಷ ಸುರೇಶ ಶೆಟ್ಟಿ ದ್ವಾರಗಳ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹೊನ್ನಪ್ಪಯ್ಯ ಗುನಗ ಧ್ವಜ ಹಸ್ತಾಂತರಿಸುವರು. ಸಾಹಿತಿ ಸುರೇಶ ನಾಯ್ಕ ಸಮ್ಮೇಳನಾಧ್ಯಕ್ಷೀಯ ಭಾಷಣ ಮಾಡುವರು. ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳುವರು. ಸಾಹಿತಿ ಸುಮುಖಾನಂದ ಜಲವಳ್ಳಿ ಅವರ  ಎಳೆ ಮಿಂಚು ಕವನ ಸಂಕಲನ ಮತ್ತು ಅಪ್ಪಂತ್ ಮಕ್ಳೆ ಕೇಳಿ’ ಪದಗಳು. ರಾಮ ಗೊಂಡ ಅವರ `ಕ್ರಾಂತಿವೀರ ಕಾನೂರು ಕೋಟೆಯ ಚೆನ್ನ ಗೊಂಡ’ ಪುಸ್ತಕ ಬಿಡುಗಡೆಗೊಳ್ಳಲಿದೆ.


ಮಧ್ಯಾಹ್ನ ೧೨ ಗಂಟೆಗೆ ಸಾಹಿತಿ ಎಸ್.ಎಂ.ಹೆಗಡೆ ಅಧ್ಯಕ್ಷತೆಯಲ್ಲಿ ವಿಚಾರ ಮಂಥನ ನಡೆಯಲಿದೆ. “ಶರಾವತಿ ಸುತ್ತ ಒಂದು ನೋಟ” ಕುರಿತು ಸಂದೀಪ ಭಟ್ಟ, “ಹೊನ್ನಾವರದ ಯಕ್ಷಗಾನ ಮೇಳಗಳು” ಕುರಿತು ಆನಂದ ನಾಯ್ಕ, “ಸೌಹಾರ್ದತೆ ಮತ್ತು ಹೊನ್ನಾವರ” ಕುರಿತು ಪ್ರಶಾಂತ ಪಟಗಾರ ಪ್ರಬಂಧ ಮಂಡಿಸುವರು. ಮಧ್ಯಾಹ್ನ ೧-೩೦ ಗಂಟೆಗೆ ಸಾಹಿತಿ ಸುಧಾ ಆಡುಕಳ ಅಧ್ಯಕ್ಷತೆಯಲ್ಲಿ ಕವಿ ಸಮಯ ಗೋಷ್ಠಿ ನಡೆಯಲಿದ್ದು ಆಯ್ದ ಕವಿಗಳು ಪಾಲ್ಗೊಳ್ಳುವರು. ಮಧ್ಯಾಹ್ನ ೩ ಗಂಟೆಗೆ ಸಮ್ಮೇಳನಾಧ್ಯಕ್ಷರ ಬದುಕು ಬರಹ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ನಡೆಯಲಿದೆ. ಸಂಜೆ ೪-೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸುವರು. ಸಾಹಿತಿ ಶ್ರೀಪಾದ ಶೆಟ್ಟಿ ಸಮಾರೋಪ ಮಾತನಾಡುವರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಗಣ್ಯರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.


ಸಮ್ಮೇಳನದ ಲೋಗೋ ಬಿಡುಗಡೆಗೊಳಿಸಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಸಾಹಿತ್ಯ ಪರಿಷತ್ತಿಗೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಆದರೂ‌ ದಾನಿಗಳ ಸಹಕಾರದ ಮೇರೆಗೆ ಸಮ್ಮೇಳನ ನಡೆಸಲಾಗುತ್ತಿದೆ. ತಾಲೂಕ ಕಸಾಪ ಸಂಘಟನೆ ಸಮ್ಮೇಳನದ ಯಶ್ವಸಿಗೆ ಸಕಲ ರೀತಿಯಲ್ಲಿಯೂ ಶ್ರಮಿಸುತ್ತಿದ್ದು, ಕಾರ್ಯಕ್ರಮದ ಯಶ್ವಸಿಗೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.


ಕಸಾಪ ತಾಲೂಕು ಗೌರವ ಕಾರ್ಯದರ್ಶಿಗಳಾದ ಎಚ್.ಎಂ.ಮಾರುತಿ, ಗಜಾನನ ನಾಯ್ಕ, ಕೋಶಾಧ್ಯಕ್ಷ ನಾರಾಯಣ ಹೆಗಡೆ, ಸದಸ್ಯರಾದ ಜನಾರ್ಧನ ಕಾಣಕೋಣಕರ, ಸಾಧನಾ ಬರ್ಗಿ, ಮಹೇಶ ಭಂಡಾರಿ, ಕೇಶವ ಶೆಟ್ಟಿ, ರಾಮ ಗೊಂಡ ಇದ್ದರು.

ವರದಿ; ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!