ಭಟ್ಕಳ: ತಾಲೂಕಿನ ಬೈಲೂರಿನ ಶೇರುಗಾರಕೇರಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸೋಮವಾರ ಭಗವದ್ಗೀತೆಯ ಮೂರನೇ ಅಧ್ಯಾಯ ಸಮರ್ಪಣೆ ಹಾಗೂ ಮಾತೃವಂದನೆ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ರೂಪಾ ಖಾರ್ವಿ ಮಾತನಾಡಿ, ಮನುಷ್ಯ ಜೀವನವನ್ನು ಸರಿಯಾದ ದಾರಿಯಲ್ಲಿ ನಡೆಸಲು ಭಗವದ್ಗೀತೆ ಮಹತ್ವದ ಮಾರ್ಗದರ್ಶಕ ಗ್ರಂಥವಾಗಿದೆ ಎಂದು ಹೇಳಿದರು. ಗೀತೆಯ ಪಠಣದಿಂದ ವಿದ್ಯಾರ್ಥಿಗಳಲ್ಲಿ ಚಂಚಲತೆ ಕಡಿಮೆಯಾಗುತ್ತಿದ್ದು, ಏಕಾಗ್ರತೆ ಹೆಚ್ಚುತ್ತದೆ. ಸಂಸ್ಕೃತ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ನಮ್ಮ ಸಂಪ್ರದಾಯಗಳಲ್ಲಿ ವೈಜ್ಞಾನಿಕ ಅಂಶಗಳು ಅಡಕವಾಗಿದ್ದು, ಅವುಗಳ ಕುರಿತು ಅಧ್ಯಯನದ ಕೊರತೆಯಿಂದ ಕೆಲವೊಮ್ಮೆ ಮೌಢ್ಯವೆಂದು ಭಾಸವಾಗುತ್ತದೆ ಎಂದು ತಿಳಿಸಿದರು.
ಅರ್ಚಕರಾದ ಗಣೇಶ ಭಟ್ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ದೇವಸ್ಥಾನದಲ್ಲಿ ಜಾತಿ-ಜನಾಂಗ ಬೇಧವಿಲ್ಲದೆ ಮಕ್ಕಳಿಗೆ ಭಗವದ್ಗೀತೆ, ವಿಷ್ಣು ಸಹಸ್ರನಾಮ ಹಾಗೂ ರಾಮರಕ್ಷಾ ಸ್ತೋತ್ರಗಳನ್ನು ಬೋಧಿಸಲಾಗುತ್ತಿದೆ ಎಂದರು. ತಾಯಿ-ತಂದೆಯರು ತಮ್ಮ ಮಕ್ಕಳನ್ನು ಸತ್ಪಥದಲ್ಲಿ ನಡೆಯುವಂತೆ ರೂಪಿಸುವುದೇ ಜೀವನದ ಸಾರ್ಥಕತೆ. ಮಗು ಲೋಕೋಪಯೋಗಿಯಾಗಿದಾಗ ಪೋಷಕರಿಗೆ ಸಂತೋಷ ಸಿಗುತ್ತದೆ, ಆದರೆ ಅದೇ ಮಗು ಸಮಾಜಕ್ಕೆ ಕಂಠಕವಾದರೆ ಅದಕ್ಕಿಂತ ದೊಡ್ಡ ದುಃಖ ಮತ್ತೊಂದಿಲ್ಲ ಎಂದು ಹೇಳಿದರು. ಕೇವಲ ಪೂಜೆಗಳಿಂದ ಮಾತ್ರ ಸಾಕಾಗುವುದಿಲ್ಲ; ಮಕ್ಕಳು ಗುಣವಂತರು, ಜ್ಞಾನವಂತರು, ಬುದ್ಧಿವಂತರು ಹಾಗೂ ನೀತಿವಂತರಾಗಬೇಕು. ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ದುರಭ್ಯಾಸಗಳಿಗೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಧಾರ್ಮಿಕ ಹಾಗೂ ನೈತಿಕ ಶಿಕ್ಷಣದ ಮೂಲಕ ಅವರನ್ನು ಸರಿದಾರಿಗೆ ತರುವ ಅಗತ್ಯವಿದೆ ಎಂದರು. ಭಗವದ್ಗೀತೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯವಾಗುವುದರಿಂದ ಇಂತಹ ಪವಿತ್ರ ಗ್ರಂಥವನ್ನು ಎಲ್ಲ ದೇವಸ್ಥಾನಗಳಲ್ಲಿಯೂ ಬೋಧಿಸುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಭಗವದ್ಗೀತೆಯ ಮೂರನೇ ಅಧ್ಯಾಯವನ್ನು ಭಕ್ತಿಭಾವದಿಂದ ಪಠಿಸಿದರು. ಗೀತೆಗೆ ಸಂಬಂಧಿಸಿದ ವಿಚಾರಗಳ ಕುರಿತು ಆಯೋಜಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕ ಉಲ್ಲಾಸ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಪೂರ್ಣಿಮಾ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ದೇವಸ್ಥಾನದ ಅಧ್ಯಕ್ಷ ಮಂಜುನಾಥ ನಾಯ್ಕ, ಮೊಕ್ತೆಸರ ಉಮೇಶ ನಾಯ್ಕ, ಡಾ. ವಾದಿರಾಜ್ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

More Stories
ಎಐಟಿಎಂನಲ್ಲಿ ವಿಟಿಯು ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿ ಚಾಲನೆ
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು