August 30, 2025

ಸೈಯ್ಯದ್ ಅಲಿ ಕ್ಯಾಂಪಸ್ ನಲ್ಲಿ ಡಾ. ಎಂ.ಟಿ. ಹಸನ್ ಬಾಪಾ ಮೆಮೋರಿಯಲ್ ಹಾಲ್ ಉದ್ಘಾಟನೆ

ಭಟ್ಕಳ :ಶಿಕ್ಷಣ ಪ್ರೇಮಿ ಹಾಗೂ ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಸ್ಥಾಪಕಾಧ್ಯಕ್ಷ ದಿವಂಗತ ಡಾ. ಎಂ.ಟಿ. ಹಸನ್ ಬಾಪಾ ಅವರ ಸ್ಮರಣಾರ್ಥ ಭಟ್ಕಳದ ಜಾಮಿಯಾಬಾದ್ ರಸ್ತೆಯ ಸೈಯ್ಯದ್ ಅಲಿ ಕ್ಯಾಂಪಸ್ನಲ್ಲಿರುವ ಶಮ್ಸ್ ಪಿಯು ಕಾಲೇಜ್ ಮತ್ತು ನ್ಯೂ ಶಮ್ಸ್ ಸ್ಕೂಲ್ನಲ್ಲಿ ನಿರ್ಮಿತವಾದ ನೂತನ ಸಭಾಂಗಣವನ್ನು ಲೋಕಾರ್ಪಣೆಗೊಳಿಸಲಾಯಿತು.

ರಿಬ್ಬನ್ ಕತ್ತರಿಸುವ ಮೂಲಕ ಸಭಾಂಗಣವನ್ನು ಉದ್ಘಾಟಿಸಿದ ಡಾ. ಹಸನ್ ಬಾಪಾ ಅವರ ಪುತ್ರ ಅನಂ ಆಲಾ ಎಂ.ಟಿ., ತಮ್ಮ ತಂದೆಯವರ ಶಿಕ್ಷಣ ಕ್ಷೇತ್ರದ ಕೊಡುಗೆಯನ್ನು ಸ್ಮರಿಸಿದರು. ತಂದೆಯವರು ಈ ಸಂಸ್ಥೆಯ ಬೆಳವಣಿಗೆಗೆ ನೀಡಿದ ಕೊಡುಗೆ ಅಪಾರ. ಅವರ ಸ್ಮರಣಾರ್ಥ ಈ ಸಭಾಂಗಣವನ್ನು ಉದ್ಘಾಟಿಸುವುದು ಸಂತೋಷದ ಕ್ಷಣ. ಇದು ಅವರ ಕನಸುಗಳನ್ನು ಮುಂದುವರೆಸುವ ಒಂದು ಹೆಜ್ಜೆ ಎಂದು ಅವರು ಭಾವುಕರಾಗಿ ಹೇಳಿದರು.

ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್ ಪ್ರಸ್ತಾವಿಕ ಭಾಷಣದಲ್ಲಿ, ಡಾ. ಹಸನ್ ಬಾಪಾ ಈ ಸಂಸ್ಥೆಯನ್ನು ಕೇವಲ ಒಂದು ಶಿಕ್ಷಣ ಸಂಸ್ಥೆಯಾಗಿ ಕಾಣದೆ, ಒಂದು ಶಿಕ್ಷಣ ಆಂದೋಲನವಾಗಿ ರೂಪಿಸಿದರು. ವ್ಯಕ್ತಿಗಳ ಬೆಳವಣಿಗೆಗೂ ಅವರು ಒತ್ತು ನೀಡಿದರು. ಇಂದು ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಆಡಳಿತ ಮಂಡಳಿ ಶ್ರಮಿಸುತ್ತಿದೆ ಎಂದರು.

ಚಿಂತಕ ಹಾಗೂ ವಿದ್ವಾಂಸ ಮೌಲಾನಾ ಅಬ್ದುಲ್ ಮುನೀರಿ ಅವರು ಡಾ. ಹಸನ್ ಬಾಪಾ ರ ಜೀವನ ಮತ್ತು ಕೊಡುಗೆಗಳ ಕುರಿತು ಬೆಳಕು ಚೆಲ್ಲಿದರು. ಮಾಜಿ ಕಾರ್ಯದರ್ಶಿ ಡಾ. ಹನೀಫ್ ಶಬಾಬ್, ಡಾ. ಹಸನ್ ಬಾಪಾ ಜೊತೆಗಿನ ತಮ್ಮ ಒಡನಾಟದ ಸ್ಮೃತಿಗಳನ್ನು ಭಾವುಕವಾಗಿ ನೆನಪಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮಾಜಿ ಅಧ್ಯಕ್ಷ ಕಾದಿರ್ ಮೀರಾ ಪಟೇಲ್ ವಹಿಸಿದ್ದರು. ವೇದಿಕೆಯಲ್ಲಿ ತರಬಿಯತ್ ಎಜ್ಯಕೇಶನ್ ಸೂಸೈಟಿಯ ಸ್ಕೂಲ್ ಬೋಡ್ ಅಧ್ಯಕ್ಷ ನಝೀರ್ ಆಹ್ಮದ್ ಖಾಝಿ, ಸಂಸ್ಥೆಯ ಮಾಜಿ ಅಧ್ಯಕ್ಷ ಇಕ್ಬಾಲ್ ಇಕ್ಕೇರಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ಯ ಝುಬೇರ್ ಎಸ್.ಎಂ., ಉಪಾಧ್ಯಕ್ಷ ಸೈಯ್ಯದ್ ಖುತುಬ್ ಬರ್ಮಾವರ್, ಮೌಲಾನಾ ಝಿಯಾ ರುಕ್ನುದ್ದೀನ್, ಪ್ರಾಂಶುಪಾಲ ಲಿಯಾಖತ್ ಅಲಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

About The Author