June 7, 2026

ಮುರಿನಕಟ್ಟೆ ಮರುನಿರ್ಮಾಣಕ್ಕೆ ಆಗ್ರಹಿಸಿ ಭಟ್ಕಳದಲ್ಲಿ ಬೃಹತ್ ಹಿಂದೂ ಸಂಘಟನೆ ಪ್ರತಿಭಟನೆ

ಭಟ್ಕಳ: ಮುರಿನಕಟ್ಟೆ ಧ್ವಂಸ ಪ್ರಕರಣವನ್ನು ಖಂಡಿಸಿ ಹಾಗೂ ಅದನ್ನು ಕೂಡಲೇ ಮರುನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಭಟ್ಕಳ ತಾಲೂಕು ಹಿಂದೂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರು ಸಲ್ಲಿಸಿದ ಮನವಿಯಲ್ಲಿ, ಮುರಿನಕಟ್ಟೆಯು ಸ್ಥಳೀಯ ಹಿಂದೂಗಳ ಧಾರ್ಮಿಕ ನಂಬಿಕೆ ಹಾಗೂ ಸಂಪ್ರದಾಯದೊAದಿಗೆ ಬೆಸೆದುಕೊಂಡಿರುವ ದೈವಿಕ ಶಕ್ತಿ ಕೇಂದ್ರವಾಗಿದ್ದು, ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಸಾಗುವ ಹೊರೆಯನ್ನು ಇಡುವ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ವೇಳೆ ಸುಮಾರು ಹತ್ತು ವರ್ಷಗಳ ಹಿಂದೆ ಮೂಲ ಸ್ಥಳದಿಂದ ತೆರವುಗೊಳಿಸಲಾಗಿದ್ದ ಕಟ್ಟೆಯನ್ನು ಇತ್ತೀಚೆಗೆ ಆಡಳಿತ ಗುರುತಿಸಿದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ಕಾರಿ ಜಾಗದಲ್ಲಿ ಮರುನಿರ್ಮಾಣ ಮಾಡಲಾಗಿತ್ತು ಎಂದು ತಿಳಿಸಲಾಗಿದೆ.

ಆದರೆ, ಅದೇ ದಿನ ಸಂಜೆ ನಡೆದ ಘಟನೆಯಲ್ಲಿ ಮುರಿನಕಟ್ಟೆ ಧ್ವಂಸಗೊAಡಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು, ಪ್ರಕರಣಕ್ಕೆ ಸಂಬAಧಿಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಹಾಗೂ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಪ್ರಾಂತ ಮುಖ್ಯ ಸಂಚಾಲಕ ಶ್ರೀಕಾಂತ ಶೆಟ್ಟಿ, “ಮುರಿನಕಟ್ಟೆ ಧ್ವಂಸದಿAದ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಅದನ್ನು ಮರುನಿರ್ಮಾಣ ಮಾಡಲೇಬೇಕು. ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು. ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆ ಕುರಿತ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಸಂಚಾಲಕ ಪುಂಡಲೀಕ ದಳವಾಯಿ ಮಾತನಾಡಿ, “ಮುರಿನಕಟ್ಟೆ ಮರುನಿರ್ಮಾಣದ ವಿಚಾರದಲ್ಲಿ ಹಿಂದೂ ಸಮಾಜದ ಹೋರಾಟ ಮುಂದುವರಿಯಲಿದೆ. ಅಗತ್ಯವಿದ್ದರೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಿದೆ” ಎಂದು ಎಚ್ಚರಿಕೆ ನೀಡಿದರು. ಹಿರಿಯರ ಮನವಿಗೆ ಗೌರವ ನೀಡಿ ಕೆಲವು ಕಾರ್ಯಕ್ರಮಗಳನ್ನು ಹಿಂದಕ್ಕೆ ಪಡೆದಿದ್ದರೂ, ಮರುನಿರ್ಮಾಣದ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಹೂವಿನಪೇಟೆ, ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ತಾಲೂಕು ಆಡಳಿತ ಸೌಧ ತಲುಪಿತು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸ್ವಯಂಪ್ರೇರಿತ ಬಂದ್‌ಗೆ ಪಟ್ಟಣದ ವ್ಯಾಪಾರಸ್ಥರೂ ಬೆಂಬಲ ಸೂಚಿಸಿದ್ದು, ಬಹುತೇಕ ಅಂಗಡಿ-ಮುAಗಟ್ಟುಗಳು ಮುಚ್ಚಿದ್ದವು. ಪ್ರತಿಭಟನೆ ಹಾಗೂ ಬಂದ್ ಶಾಂತಿಯುತವಾಗಿ ನಡೆದ ಹಿನ್ನೆಲೆಯಲ್ಲಿ ಸಂಘಟಕರು ಸಂತಸ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಜಯಂತ ನಾಯ್ಕ, ಸಹಸಂಚಾಲಕ ನಾಗೇಶ ನಾಯ್ಕ, ಕುಮಾರ ನಾಯ್ಕ, ಸುಬ್ರಹ್ಮಣ್ಯ ಕುಮಟಾ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯ ಹಿಂದೂ ಬಾಂಧವರು ಭಾಗವಹಿಸಿದ್ದರು.

ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತ ಜಿ. ಮಹೇಶ್ ಅವರು, ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

About The Author

error: Content is protected !!