ಭಟ್ಕಳ, ಜೂನ್ 9: ತಾಲೂಕಿನ ಹಾಡುವಳ್ಳಿ ಗ್ರಾಮದ ಕುಳವಾಡಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟದ ಮೇಲೆ ಭಟ್ಕಳ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಸುಮಾರು ₹50 ಸಾವಿರ ನಗದು ಸೇರಿದಂತೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಮಾಹಿತಿಯಂತೆ, ಆರೋಪಿತರು ಕೋಳಿ ಹುಂಜಗಳ ಕಾಲುಗಳಿಗೆ ಕತ್ತಿಗಳನ್ನು ಕಟ್ಟಿ ಪರಸ್ಪರ ಕಾದಾಟಕ್ಕೆ ಬಿಟ್ಟು, ಅದರ ಮೇಲೆ ಹಣದ ಪಂತ ಹಾಕಿ ಜೂಜಾಟ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪಿಎಸೈ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಸ್ಥಳದಲ್ಲಿದ್ದ ಆರು ಮಂದಿಯನ್ನು ಬಂಧಿಸಿದೆ.
ದಾಳಿಯ ವೇಳೆ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರದ ಪರವಾಗಿ ಪಿಎಸೈ ಮಲ್ಲಿಕಾರ್ಜುನಯ್ಯ ಕೊರಾಣಿ ದೂರು ದಾಖಲಿಸಿದ್ದಾರೆ.

ಬಂಧಿತರನ್ನು ಮಂಜುನಾಥ ಹೊನ್ನಪ್ಪ ನಾಯ್ಕ (35), ಶ್ರೀಕಾಂತ ಮಾದೇವ ನಾಯ್ಕ (27), ದುರ್ಗಪ್ಪ ಹೊನ್ನಪ್ಪ ನಾಯ್ಕ (52), ಅನಂತ ನಾಗಪ್ಪ ಬಾಂದಿ (46), ಮಾಸ್ತಪ್ಪ ಮಂಜಪ್ಪ ನಾಯ್ಕ (65) ಹಾಗೂ ಮಂಜುನಾಥ ಶನಿಯಾರ ನಾಯ್ಕ (40) ಎಂದು ಗುರುತಿಸಲಾಗಿದೆ.
ಇದೇ ವೇಳೆ ಯಲ್ವಡಿಕವೂರ ನಿವಾಸಿ ಲಕ್ಷಣ ಬಡಿಯಾ ನಾಯ್ಕ ದಾಳಿಯ ವೇಳೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪೊಲೀಸರ ಈ ಕಾರ್ಯಾಚರಣೆಯಿಂದ ಪ್ರದೇಶದಲ್ಲಿ ಅಕ್ರಮ ಜೂಜಾಟ ಚಟುವಟಿಕೆಗಳಿಗೆ ಕಡಿವಾಣ ಬೀಳುವ ನಿರೀಕ್ಷೆ ವ್ಯಕ್ತವಾಗಿದೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ