ಭಟ್ಕಳ: ಪಟ್ಟಣದ ರಘುನಾಥ್ ರಸ್ತೆ ಸಮೀಪದ ಮಣ್ಕುಳಿ–ಪುಷ್ಪಾಂಜಲಿ ಥಿಯೇಟರ್ ವ್ಯಾಪ್ತಿಯ ವಾರ್ಡ್ 15 ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯುಜಿಡಿ (ಒಳಚರಂಡಿ) ಚೇಂಬರ್ ಸೋರಿಕೆಯಾಗುತ್ತಿದ್ದು, 50ಕ್ಕೂ ಹೆಚ್ಚು ಬಾವಿಗಳ ನೀರು ಕಲುಷಿತಗೊಂಡಿದೆ. ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸದಿದ್ದರೆ ಜೂನ್ 15ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ಸಾರ್ವಜನಿಕರು ಎಚ್ಚರಿಸಿದ್ದಾರೆ.
*ಪರಸ್ಪರ ದೂಷಣೆಯಲ್ಲಿ ನಗರಸಭೆ – ಐಆರ್ಬಿ:*
ಸ್ಥಳೀಯ ರಾಘವೇಂದ್ರ ಮಠದ ಸಮೀಪ ಯುಜಿಡಿ ಚೇಂಬರ್ ಬ್ಲಾಕ್ ಆಗಿರುವುದರಿಂದ ಮಲಿನ ನೀರು ಹೊರಗೆ ಹರಿದು ಸುತ್ತಮುತ್ತಲಿನ ಬಾವಿಗಳನ್ನು ಸೇರುತ್ತಿದೆ. ಕಳೆದ ಒಂದು ತಿಂಗಳಿನಿಂದ ಒಳಚರಂಡಿ ನೀರು ರಸ್ತೆಯ ಗಟಾರಿನಲ್ಲಿ ಹರಿಯುತ್ತಿದ್ದು, ತೀವ್ರ ದುರ್ವಾಸನೆ ಉಂಟಾಗಿದೆ. ಈ ಬಗ್ಗೆ ನಗರಸಭೆಗೆ ದೂರು ನೀಡಿದರೆ, “ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಐಆರ್ಬಿ (IRB) ಸಂಸ್ಥೆಯನ್ನು ಸಂಪರ್ಕಿಸಿ” ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನೊಂದೆಡೆ ಐಆರ್ಬಿ ಅಧಿಕಾರಿಗಳು, “ನಮ್ಮ ಹೊಸ ಲೈನ್ಗೆ ಸಂಪರ್ಕ ಕಲ್ಪಿಸುವ ಮುನ್ನ ನಗರಸಭೆಯವರು ಹಳೆಯ ಯುಜಿಡಿ ಸಂಪರ್ಕವನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದರಿಂದ ಈ ಸಮಸ್ಯೆ ಉಂಟಾಗಿದೆ” ಎನ್ನುತ್ತಿದ್ದಾರೆ. ಉಭಯ ಸಂಸ್ಥೆಗಳ ಈ ಆರೋಪ-ಪ್ರತ್ಯಾರೋಪದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಸಾಂಕ್ರಾಮಿಕ ರೋಗದ ಭೀತಿ :
ರಘುನಾಥ್ ರಸ್ತೆಯ ಮಣ್ಕುಳಿ–ಪುಷ್ಪಾಂಜಲಿ ಮಾರ್ಗದಲ್ಲಿ ಮಲಿನ ನೀರು ನಿರಂತರವಾಗಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಹಾಗೂ ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಾವಿ ನೀರು ಕಲುಷಿತಗೊಂಡಿರುವುದರಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಆರೋಗ್ಯ ಸಮಸ್ಯೆಗಳ ಭೀತಿ ಎದುರಾಗಿದೆ.
“ಮಳೆಗಾಲ ಆರಂಭವಾಗಿರುವುದರಿಂದ ಬಾವಿಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುವುದು ಕಷ್ಟಕರವಾಗಿದೆ. ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಯುಜಿಡಿ ಚೇಂಬರ್ ಸೋರಿಕೆಯನ್ನು ದುರಸ್ತಿಪಡಿಸಬೇಕು. ಗಟಾರಿನಲ್ಲಿ ಮಲಿನ ನೀರು ಹರಿಯದಂತೆ ಕ್ರಮ ಕೈಗೊಂಡು, ಕಲುಷಿತಗೊಂಡಿರುವ ಬಾವಿಗಳನ್ನು ಸ್ವಚ್ಛಗೊಳಿಸಿ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜೂನ್ 15ರಂದು ಹೆದ್ದಾರಿ ತಡೆ
ಸಮಸ್ಯೆಯನ್ನು ಇನ್ನೆರಡು ದಿನಗಳೊಳಗೆ ಬಗೆಹರಿಸದಿದ್ದಲ್ಲಿ ಜೂನ್ 15ರಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ನಗರಸಭೆಯೇ ನೇರ ಹೊಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಪರಮೇಶ್ವರ ನಾಯ್ಕ, ಸುರೇಶ ನಾಯ್ಕ, ಸುಧಾಕರ ನಾಯ್ಕ, ದಿನೇಶ ನಾಯ್ಕ, ನಾಗರಾಜ ನಾಯ್ಕ, ಅನಂತ ದೇವಾಡಿಗ, ಶೇಖರ ನಾಯ್ಕ, ರಮೇಶ ನಾಯ್ಕ, ಈಶ್ವರ ನಾಯ್ಕ, ಕಿಶೋರ ನಾಯ್ಕ, ಮನೋಜ ನಾಯ್ಕ, ಮಾದೇವ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
More Stories
ಗಾಂಜಾ ಸೇವನೆ ದೃಢ; ಮೂವರು ಯುವಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲು
ಕಾಲೇಜು ಶುಲ್ಕದ ಹಣ ವಾಪಸ್ ಸಿಗದೆ ಮನನೊಂದ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ
ಭಟ್ಕಳದಲ್ಲಿ ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ: 16 ಅಂಗಡಿಗಳ ಪರಿಶೀಲನೆ