June 16, 2026

ಶಾಸಕರೇ ಎಚ್ಚರ, ಇನ್ನೊಂದು ತಿಂಗಳಲ್ಲಿ ಅಕ್ರಮ ಸಾರಾಯಿ, ಗಾಂಜಾ ಹತೋಟಿಗೆ ಬಾರದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ: ಅನಂತಮೂರ್ತಿ ಹೆಗಡೆ ಎಚ್ಚರಿಕೆ

ಶಿರಸಿ: ಶಿರಸಿ ಮತ್ತು ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಾಟ ಹಾಗೂ ಗಾಂಜಾ ಹಾವಳಿಯನ್ನು ತಡೆಗಟ್ಟುವಂತೆ ಆಗ್ರಹಿಸಿ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸಾರ್ವಜನಿಕರ ವತಿಯಿಂದ ಶಿರಸಿ ಸಹಾಯಕ ಆಯುಕ್ತರ (ಎಸಿ) ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಬ್ರಹ್ಮರ್ಷಿ ನಾರಾಯಣ ಗುರುಗಳ “ಸಾರಾಯಿ ವಿಷ, ಅದನ್ನು ಮಾರಬೇಡ, ಮಾಡಬೇಡ, ಕುಡಿಯಬೇಡ” ಎಂಬ ಸಂದೇಶವನ್ನು ಸ್ಮರಿಸಿದರು. “ಇಂದು ಸಣ್ಣ ಸಣ್ಣ ಹಳ್ಳಿಗಳಲ್ಲೂ ಹೆಂಡದ ಹಾವಳಿ ಹೆಚ್ಚಾಗಿದೆ. ಪಟ್ಟಣಕ್ಕೆ ಹೋಗಿ ಕುಡಿಯಲು ಖರ್ಚಾಗುತ್ತದೆ ಎಂಬ ಕಾರಣಕ್ಕೆ ಜನರು ಹಳ್ಳಿಯಲ್ಲೇ ಸಿಗುವ ಕಮರಿ ಪೇಟೆಯ ಕಳಪೆ ಗುಣಮಟ್ಟದ ಹೆಂಡಕ್ಕೆ ದಾಸರಾಗುತ್ತಿದ್ದಾರೆ. ಇದು ನೇರವಾಗಿ ಕಿಡ್ನಿ ಹಾಗೂ ಲಿವರ್ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯ ಶಾಸಕರು ಇದರ ನಿಯಂತ್ರಣಕ್ಕೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ದಂಧೆಕೋರರ ಹಾವಳಿ ಮಿತಿಮೀರಿದೆ. ಇನ್ನು ಒಂದು ತಿಂಗಳೊಳಗೆ ಅಕ್ರಮ ಸಾರಾಯಿ ಹಾಗೂ ಡ್ರಗ್ಸ್ ಜಾಲವನ್ನು ಹತೋಟಿಗೆ ತರದಿದ್ದರೆ ಹಳ್ಳಿ ಹಳ್ಳಿಗಳಿಂದ ಜನ ದಂಗೆ ಎದ್ದು ಬಂದು ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ,” ಎಂದು ಅವರು ತೀವ್ರವಾಗಿ ಎಚ್ಚರಿಸಿದರು.

ಅವ್ಯಾಹತವಾಗಿ ಸಾಗುತ್ತಿರುವ ದಂಧೆ: ಪ್ರಮುಖರ ಆರೋಪ

ಎಂ. ಕೆ. ತಿಮ್ಮಪ್ಪ (ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ): “ಸಾರಾಯಿ ಮಾರಾಟಗಾರರು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಕಾರು ಮತ್ತು ಖಾಸಗಿ ವಾಹನಗಳಲ್ಲಿ ಸಾರಾಯಿ ತುಂಬಿಕೊಂಡು ಹೋಗಿ ಹಳ್ಳಿಗಳಲ್ಲಿ ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ.”

ಮಹಾಂತೇಶ ಹಾದಿಮನಿ: “ಯುವ ಜನತೆ ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಚಾಕಲೇಟ್ ರೂಪದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ನಗರದ ಕೆಲವು ನಿರ್ದಿಷ್ಟ ಜಾಗಗಳು ಗಾಂಜಾ ಅಡ್ಡೆಗಳಾಗಿ ಮಾರ್ಪಟ್ಟಿದ್ದು, ಪೊಲೀಸರಿಗೆ ಇದರ ಮಾಹಿತಿ ಇದ್ದರೂ ರಾಜಕೀಯ ಒತ್ತಡದಿಂದಾಗಿ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಿ ತಕ್ಷಣ ಮಾರಾಟಗಾರರನ್ನು ಬಂಧಿಸಬೇಕು.”

ಜ್ಯೋತಿ ಭಟ್ (ಸಾಂತ್ವನ ಮಹಿಳಾ ವೇದಿಕೆ): “ಶಾಂತವಾಗಿದ್ದ ಶಿರಸಿ ನಗರದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ಇದರಿಂದ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ಕೇವಲ ಸೇವಿಸುವವರ ಮೇಲಷ್ಟೇ ಅಲ್ಲದೆ, ಈ ದಂಧೆಯ ಬುಡ ಸಮೇತ ಕಿತ್ತೊಗೆಯಲು ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.”

ಸುರೇಶ್ ನಾಯ್ಕ್: “ಹಳ್ಳಿಗಳಲ್ಲಿ ಮಾರಾಟವಾಗುತ್ತಿರುವ ‘ಸೆಕೆಂಡ್ಸ್ ಸಾರಾಯಿ’ಯನ್ನು ತಕ್ಷಣವೇ ಬಂದ್ ಮಾಡಬೇಕು. ಅಧಿಕಾರಿಗಳು ಯಾರ ರಾಜಕೀಯ ಒತ್ತಡಕ್ಕೂ ಮಣಿಯದೇ ಗಾಂಜಾ ಪೂರೈಕೆಯ ಮೂಲವನ್ನು ಪತ್ತೆಹಚ್ಚಿ ನಿಯಂತ್ರಿಸಬೇಕು.”

ಮಾರುತಿ ನಾಯ್ಕ್ ಹೊಸೂರ್ (ಬಿಜೆಪಿ ಜಿಲ್ಲಾ ವಿಶೇಷ ಆಮಂತ್ರಿತ): “ಸಿದ್ದಾಪುರದಲ್ಲಿ ಗದ್ದೆಯ ಪಕ್ಕದಲ್ಲೇ ಇರುವ ವೈನ್ ಸ್ಟೋರ್‌ನಿಂದಾಗಿ ರೈತರು ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಶಾಸಕರು ತಕ್ಷಣ ಇದನ್ನು ತಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಇದೇ ಸಂದರ್ಭದಲ್ಲಿ, ಕಾನಸೂರು ವಸತಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿಯ ಸಾವು ಆತ್ಮಹತ್ಯೆಯಲ್ಲ ಎಂಬ ಅನುಮಾನವಿದ್ದು, ಪಾಲಕರು ಮಕ್ಕಳನ್ನು ವಸತಿ ಶಾಲೆಗೆ ಸೇರಿಸಲು ಹೆದರುತ್ತಿದ್ದಾರೆ. ಈ ಸಾವಿನ ಕುರಿತು ಸೂಕ್ತ ತನಿಖೆಯಾಗಬೇಕು,” ಎಂದು ಒತ್ತಾಯಿಸಿದರು.

ಗಣೇಶ್ ಕ್ಷತ್ರಿಯ: “ಬನವಾಸಿ ಹಾಗೂ ತಾಲೂಕಿನಾದ್ಯಂತ ಗಾಂಜಾ ಹಾವಳಿ ಜೋರಾಗಿದ್ದರೂ ಪೊಲೀಸರು ಆರೋಪಿಗಳನ್ನು ಹಿಡಿದು ತಕ್ಷಣವೇ ಬಿಟ್ಟುಬಿಡುತ್ತಿದ್ದಾರೆ. ಇಂತಹ ಮೃದು ಧೋರಣೆ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಅನಿವಾರ್ಯ,” ಎಂದರು.


ಪ್ರತಿಭಟನೆಯಲ್ಲಿ ಪ್ರಮುಖರಾದ ವಿ. ಎಮ್. ಭಟ್, ಅಣ್ಣಪ್ಪ ಹಸ್ಲರ್, ಶ್ರೀಕಾಂತ್ ಬಳ್ಳಾರಿ, ಹರೀಶ್ ಪಾಲೇಕರ್, ವಿನಾಯಕ ನಾಯ್ಕ್, ಅನಸೂಯ ಹೆಗಡೆ, ಯುವರಾಜ ಗೌಡ ಸಂತೋಳ್ಳಿ, ಮಂಜುನಾಥ ನಾಯ್ಕ್, ರಾಘವೇಂದ್ರ ನಾಯ್ಕ್, ಶಂಕರ್ ಹೆಗಡೆ, ಕೃಷ್ಣಮೂರ್ತಿ ಐಸೂರ್, ಗಣಪತಿ ಹೆಗಡೆ, ಶ್ರೀಪಾದ್ ಹೆಗಡೆ, ನಾರಾಯಣ ಹೆಗಡೆ, ಮಹೇಂದ್ರ ಭಟ್, ಜಿ. ಎಸ್. ಹೆಗಡೆ, ಮಂಜುನಾಥ ಪಾಟೀಲ್, ಪ್ರದೀಪ್ ಹೆಗಡೆ, ಉಪೇಂದ್ರ ಮೇಸ್ತ ಸೇರಿದಂತೆ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
ಶಿರಸಿ ತಾಲೂಕು ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಕಾರ್ಯಕ್ರಮ ಸ್ವಾಗತಿಸಿ, ನಿರ್ವಹಿಸಿದರು. ರಮೇಶ್ ಕುಪ್ಪಳ್ಳಿ ಅವರು ಬೇಡಿಕೆಗಳ ಮನವಿ ಪತ್ರವನ್ನು ವಾಚಿಸಿದರು.

About The Author

error: Content is protected !!