

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಾರ್ವಜನಿಕರು ಹಾಗೂ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಅಥಣಿ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.

ಮೂಲಭೂತ ಸೌಕರ್ಯ ಹಾಗೂ ಸ್ವಚ್ಛತೆಗೆ ಆಗ್ರಹ:
ಮನವಿ ಸಲ್ಲಿಸಿದ ನಂತರ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ ಮಾತನಾಡಿ, “ಅಥಣಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಬೇಕು. ಅಥಣಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಶಿವಯೋಗಿ ನಗರವನ್ನು ತಕ್ಷಣವೇ ಪುರಸಭೆ ವ್ಯಾಪ್ತಿಗೆ ಒಳಪಡಿಸಬೇಕು” ಎಂದು ಒತ್ತಾಯಿಸಿದರು.

ಟ್ರಾಫಿಕ್ ಸಮಸ್ಯೆ ಮತ್ತು ಶಿಕ್ಷಣ ಸಂಸ್ಥೆಗಳ ದಂಧೆಗೆ ಬ್ರೇಕ್ ಹಾಕಿ:
“ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು, ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸಾರ್ವಜನಿಕರು ಹಾಗೂ ಪಾದಚಾರಿಗಳು ಇದರಿಂದ ತೊಂದರೆ ಅನುಭವಿಸುತ್ತಿದ್ದು, ಇದಕ್ಕೆ ಆಡಳಿತ ಮಂಡಳಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇನ್ನು ತಾಲೂಕಿನ ಕೆಲವು ಅನುದಾನಿತ ಶಾಲೆಗಳಲ್ಲಿ ಸರ್ಕಾರದ ಆದೇಶವನ್ನು ಮೀರಿ ವಿದ್ಯಾರ್ಥಿಗಳಿಂದ ಕಾನೂನುಬಾಹಿರವಾಗಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ತಾಲೂಕು ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರಗಳು:
ಇದೇ ಸಂದರ್ಭದಲ್ಲಿ ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರದ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ಸಚಿವರು, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳು ಸೇರಿದಂತೆ ಒಟ್ಟಾರೆ ಇಡೀ ವ್ಯವಸ್ಥೆಯು ಅನ್ನದಾತ ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಇನ್ನಾದರೂ ಮುಂದಾಗುತ್ತಾರೆಯೇ? ಎಂದು ಅವರು ಪ್ರಶ್ನಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ಅನಿಲ ಬಾಮನೆ, ಶರಣಪ್ಪ ಶಿಂಧೆ, ಎಂ. ಶರ್ಮಾ, ಕಿರಣ ಪಾಟೋಳೆ, ಅಮೂಲ ಚವಾಣ, ಶಿವಾನಂದ ನಾವಿ, ಅಶೋಕ ಬಡಿಗೇರ ಹಾಗೂ ಮಹಿಳಾ ಮುಖಂಡರಾದ ಸರಸ್ವತಿ ನೇಮಗೌಡ, ಕವಿತಾ ಭೋಸಲೆ, ಶಾಂತಾ ಶಿಂಧೆ, ಉಜ್ವಲ ಪಾಟೋಳೆ, ರೇಷ್ಮಾ ತೇಲಿ, ಸಾವಿತ್ರಿ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಮಹೇಶ ಶರ್ಮ
About The Author




More Stories
ಅಥಣಿಯ ಶಿವಯೋಗಿ ನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಾವ: ಹೆದ್ದಾರಿಯಲ್ಲಿ ‘ಸ್ಪೀಡ್ ಬ್ರೇಕರ್’, ಶಾಲಾ ಮೇಲ್ದರ್ಜೆಗೆ ಸ್ಥಳೀಯರ ಉಗ್ರ ಆಗ್ರಹ.
ಅಥಣಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ರಾಜು ಡವರಿ ಅವರಿಂದ ಧ್ವಜಾರೋಹಣ
ಮದಭಾವಿಯಲ್ಲಿ ಸಡಗರದ ಸ್ವಾತಂತ್ರ್ಯ ದಿನಾಚರಣೆ: ವೀರಯೋಧರಿಂದ ಜಂಟಿ ಧ್ವಜಾರೋಹಣ