June 16, 2026

ಭಟ್ಕಳದಲ್ಲಿ ಜೂನ್ 18 ರಂದು ಕನ್ನಡದಲ್ಲಿ 100 ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಕಸಾಪದಿಂದ ಅಭಿನಂದನಾ ಸಮಾರಂಭ

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಮತ್ತು ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಪ್ರತಿಶತ 100 ಕ್ಕೆ 100 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ತಾಲೂಕಿನ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಬರುವ ಜೂನ್ 18ರ ಗುರುವಾರ ಬೆಳಿಗ್ಗೆ 10:00 ಗಂಟೆಗೆ ಭಟ್ಕಳದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಗೌರವಾನ್ವಿತ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ ನಾಯಕ ಅವರು ಉದ್ಘಾಟಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಆನಂದಾಶ್ರಮ ಪ್ರೌಢಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ವಿನುತ ಡಿಸೋಜ ಅವರು ಅಭಿನಂದನಾ ಪತ್ರಗಳನ್ನು ಪ್ರಧಾನ ಮಾಡಲಿದ್ದಾರೆ.


ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಸಹಕಾರಿ ಧುರೀಣ ಹಾಗೂ ಕಸಾಪ ಹಿರಿಯ ಆಜೀವ ಸದಸ್ಯ ಡಿ.ಬಿ. ನಾಯ್ಕ, ಖ್ಯಾತ ಸಾಹಿತಿಗಳಾದ ಮಾನಾಸುತ ಶಂಭು ಹೆಗಡೆ ಹಾಗೂ ನಾರಾಯಣ ಯಾಜಿ ಶಿರಾಲಿ, ಸ್ಪಂದನ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಉಪಸ್ಥಿತರಿರಲಿದ್ದಾರೆ.


ಅಲ್ಲದೇ ಶಿಕ್ಷಕ ಮತ್ತು ನೌಕರರ ಸಂಘಟನೆಗಳ ಪ್ರಮುಖರಾದ ಉಮೇಶ ಕೆರೆಕಟ್ಟೆ (ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು), ಎಂ.ಎನ್. ನಾಯಕ್ (ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು), ಮಂಜುನಾಥ ನಾಯಕ (ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು) ಹಾಗೂ ಗಣಪತಿ ಶಿರೂರು (ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


99 ವಿದ್ಯಾರ್ಥಿಗಳಿಗೆ ಗೌರವ.
ಈ ಬಾರಿ ಭಟ್ಕಳ ತಾಲೂಕಿನಲ್ಲಿ ಕನ್ನಡ ಭಾಷೆಯಲ್ಲಿ ಶೇಕಡಾ 100 ರಷ್ಟು ಅಂಕಗಳನ್ನು ಗಳಿಸಿದ ಒಟ್ಟು 99 ವಿದ್ಯಾರ್ಥಿಗಳನ್ನು ಹಾಗೂ ಅವರ ಈ ಅಪೂರ್ವ ಸಾಧನೆಗೆ ಸೂಕ್ತ ಮಾರ್ಗದರ್ಶನ ನೀಡಿದ ತಾಲೂಕಿನ ಹೆಮ್ಮೆಯ ಕನ್ನಡ ಭಾಷಾ ಶಿಕ್ಷಕರನ್ನು ವೇದಿಕೆಯಲ್ಲಿ ವಿಶೇಷವಾಗಿ ಗೌರವಿಸಿ ಅಭಿನಂದಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಗಂಗಾಧರ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

error: Content is protected !!