ಭಟ್ಕಳ: ಭಾರತೀಯ ಕಿಸಾನ್ ಸಂಘದ ರಾಜ್ಯ ಮುಖಂಡ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ, ರೈತ ಮುಖಂಡ ಹಾಗೂ ಪ್ರಗತಿಪರ ಕೃಷಿಕ ಶ್ರೀಧರ ಎಸ್. ಹೆಬ್ಬಾರ ಹಾಕೋಡ್ಲು (74) ಅವರು ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬಳು ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರೈತಪರ ಹೋರಾಟಗಳ ಧ್ವನಿ
ಶ್ರೀಧರ ಎಸ್. ಹೆಬ್ಬಾರ ಅವರು ರೈತರ ಸಮಸ್ಯೆಗಳ ಪರವಾಗಿ ಸದಾ ಧ್ವನಿ ಎತ್ತಿದ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಭಟ್ಕಳದಲ್ಲಿ ಭಾರತೀಯ ಕಿಸಾನ್ ಸಂಘದ ಶಾಖೆಯನ್ನು ಆರಂಭಿಸಿ, ವಿದ್ಯುತ್ ದರ ಏರಿಕೆ ಸೇರಿದಂತೆ ಹಲವು ರೈತಪರ ವಿಚಾರಗಳಲ್ಲಿ ಹೋರಾಟಗಳನ್ನು ಸಂಘಟಿಸಿ ರೈತರ ಹಕ್ಕುಗಳಿಗಾಗಿ ಶ್ರಮಿಸಿದ್ದರು.
ಹವ್ಯಕ ಸಮಾಜದ ಪ್ರಮುಖ ಮುಖಂಡರಾಗಿದ್ದ ಅವರು ಉತ್ತಮ ಸಲಹೆಗಾರ ಹಾಗೂ ಮಾರ್ಗದರ್ಶಕರಾಗಿಯೂ ಹೆಸರಾಗಿದ್ದರು. ಕಳೆದ ಹಲವು ವರ್ಷಗಳಿಂದ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ರೈತರೊಂದಿಗೆ ನಿಕಟ ಸಂಪರ್ಕ ಹೊಂದಿ ಅವರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿ ಜನಮೆಚ್ಚುಗೆ ಗಳಿಸಿದ್ದರು.
ಮಾಜಿ ಸಚಿವ ಮಂಕಾಳ ವೈದ್ಯ ಸಂತಾಪ
ರೈತ ಮುಖಂಡ ಶ್ರೀಧರ ಹೆಬ್ಬಾರ ಅವರ ನಿಧನಕ್ಕೆ ಮಾಜಿ ಸಚಿವ ಮಂಕಾಳ ಎಸ್. ವೈದ್ಯ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. “ಶ್ರೀಧರ ಹೆಬ್ಬಾರ ಅವರು ಕೃಷಿ ಕ್ಷೇತ್ರ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರ ನಿಧನದಿಂದ ತಾಲೂಕು ಒಬ್ಬ ಹಿರಿಯ ಮಾರ್ಗದರ್ಶಕರನ್ನು ಹಾಗೂ ರೈತ ಧ್ವನಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ” ಎಂದು ಮಂಕಾಳ ವೈದ್ಯ ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಅವರ ನಿಧನದಿಂದ ರೈತ ಸಮುದಾಯ ಹಾಗೂ ಸಾಮಾಜಿಕ ವಲಯಕ್ಕೆ ಅಪಾರ ನಷ್ಟ ಉಂಟಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ರೈತ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.

More Stories
ಶ್ರೀವಲಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ: ಮೊಬೈಲ್ ದಾಸರಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು
ಶಬರಿಮಲೈನಲ್ಲಿ ಮುರಿನಕಟ್ಟೆ ವಿವಾದ ಶೀಘ್ರ ಪರಿಹಾರಕ್ಕೆ ಅಯ್ಯಪ್ಪ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ
ಕಪ್ಪೆಚಿಪ್ಪಿನ ದುರಂತ ಸಂತ್ರಸ್ತ ಕುಟುಂಬಗಳಿಗೆ ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರಿ ವೃಂದದಿಂದ ಆರ್ಥಿಕ ನೆರವು