ಚುಂಚಶ್ರೀಗಳ ಪಾದಯಾತ್ರೆಗೆ ಸಂಪೂರ್ಣ ಸಹಕಾರ ಮಾಜಿ ಸಚಿವ ಡಾ.ನಾರಾಯಣಗೌಡ ಘೋಷಣೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಪದ್ಮಭೂಷಣ ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಪರಿಶ್ರಮದ ಫಲವಾಗಿ ಇಂದು ವಿಶ್ವ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಶ್ರೀಮಠದ ಪೀಠಾಧಿಪತಿಗಳಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡ ಹೇಳಿದರು.
ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಬಿಜಿಎಸ್ ಸ್ಕೂಲ್ ಆವರಣದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ವತಿಯಿಂದ ನಿರ್ಮಲಾನಂದ ನಾಥ ಮಹಾಸ್ವಾಮೀಜಿಗಳು ಏಪ್ರಿಲ್ ಮಾಸದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಗ್ರಾಮ ಸಂದರ್ಶನ ಪಾದಯಾತ್ರೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 20 ವರ್ಷಗಳ ಹಿಂದೆ ಕೃಷ್ಣರಾಜಪೇಟೆ ತಾಲೂಕಿನ ಪ್ರತಿ ಗ್ರಾಮಗಳಿಗೆ ಪಾದಯಾತ್ರೆ ಮಾಡಿ ತೆಂಗಿನಕಾಯಿ ಭಕ್ತ ಸೇರಿದಂತೆ ದೇಣಿಗೆ ಸಂಗ್ರಹಿಸಿದ್ದ ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳು ಭೈರವೈಕ್ಯರಾದ ನಂತರ ಪ್ರಸ್ತುತ ಪೀಠಾಧಿಪತಿಗಳಾಗಿರುವ ನಿರ್ಮಲಾನಂದನಾಥ ಸ್ವಾಮೀಜಿಗಳು ಕೃಷ್ಣರಾಜಪೇಟೆ ತಾಲೂಕು ಸೇರಿದಂತೆ ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ ಶ್ರೀಮಠದ ಸದ್ಭಕ್ತರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಆದ್ದರಿಂದಾಗಿ ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಿಗೆ ಪಾದಯಾತ್ರೆ ಮೂಲಕ ಭಕ್ತರ ಮಠದ ಭಕ್ತರ ಮನೆಗಳಿಗೆ ಭೇಟಿ ನೀಡಿ ಕುಶಲೋಪರಿ ನಡೆಸುವ ಜೊತೆಗೆ ಶ್ರೀಮಠದ ಅಭಿವೃದ್ಧಿಗಾಗಿ ನಿಧಿ ಸಂಗ್ರಹಿಸಲು ಮುಂದಾಗಿರುವ ಶ್ರೀಗಳ ಆಲೋಚನೆಯೂ ಸ್ವಾಗತವಾಗಿದೆ ಸಂಕಷ್ಟ ಪರಿಸ್ಥಿತಿಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ಪ್ರತಿ ಹಳ್ಳಿ ಹಳ್ಳಿಗೆ ತಿರುಗಿ ನಿಧಿ ಸಂಗ್ರಹಿಸಿ ಬರಡಾಗಿದ್ದ ಆದಿಚುಂಚನಗಿರಿ ಮಠವನ್ನು ಸುವರ್ಣ ಗಿರಿಯನ್ನಾಗಿ ಬದಲಾಯಿಸುವ ಜೊತೆಗೆ ಶ್ರೀಮಠದ ಪ್ರಖ್ಯಾತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದು ದಾಖಲೆಯನ್ನು ನಿರ್ಮಾಣ ಮಾಡಿದ್ದರು. ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಉತ್ತರಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ಮಲಾನಂದನಾಥರು ಪ್ರಸ್ತುತ ಬಾಲಗಂಗಾಧರನಾಥ ಸ್ವಾಮೀಜಿಗಳು ಹಾಕಿ ಕೊಟ್ಟಿರುವ ದಾರಿಯಲ್ಲಿ ಸಾಗಲು ನಿರ್ಧಾರ ಮಾಡಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚು ವಂತಹದ್ದಾಗಿದೆ.ಚುಂಚಶ್ರೀಗಳು ಕೈಗೊಂಡಿರುವ ಮಂಡ್ಯ ಜಿಲ್ಲೆಯ ಪಾದಯಾತ್ರೆಯನ್ನು ಕೃಷ್ಣರಾಜಪೇಟೆ ತಾಲೂಕಿನ ಮೂಲಕವೇ ಆರಂಭಿಸಬೇಕು, ತಾಲೂಕಿನ ಪ್ರತಿ ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಬೇಕು. ನಾವು ಹತ್ತು ದಿನಗಳ ಕಾಲವೂ ಶ್ರೀಗಳ ಜೊತೆ ಇದ್ದು, ಭಕ್ತರ ಮನೆಗಳಿಗೆ ಭೇಟಿ ನೀಡಿ ಶ್ರೀಮಠದೊಂದಿಗೆ ತಾಲೂಕಿನ ಭಕ್ತರು ಹೊಂದಿರುವ ಬಾಂಧವ್ಯದ ವೃದ್ದಿಗೆ ಸಂಪೂರ್ಣ ಸಹಕಾರ ನೀಡಿ ಸಹಕರಿಸುತ್ತೇವೆ ಎಂದು ನಾರಾಯಣಗೌಡ ಹೇಳಿದರು.
ಕೃಷ್ಣರಾಜಪೇಟೆ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಸದ್ಭಕ್ತರ ಸಭೆಯ ಅಧ್ಯಕ್ಷತೆಯನ್ನು ಶಾಸಕ ಹೆಚ್ ಟಿ ಮಂಜು ವಹಿಸಿ ಮಾತನಾಡಿದರು. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ, ಹಿರಿಯ ರಾಜಕೀಯ ಮುತ್ಸದ್ದಿ ನಾಯಕನಹಳ್ಳಿ ಬಿ.ನಂಜಪ್ಪ ಸಭೆಯಲ್ಲಿ ಮಾತನಾಡಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕೀರ್ತಿನಾಥ ಸ್ವಾಮೀಜಿ ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದರು. ಪೂರ್ವ ನಿಯೋಜಿತ ಕಾರ್ಯಕ್ರಮಗಳಿಂದಾಗಿ ಮೈಸೂರಿನಲ್ಲಿದ್ದ ನಿರ್ಮಲಾನಂದನಾಥ ಸ್ವಾಮೀಜಿಗಳು ಮೀಟಿಂಗ್ ಮೂಲಕ ಸದ್ಭಕ್ತರೊಂದಿಗೆ ಸಮಾಲೋಚನೆ ನಡೆಸಿ ಕೃಷ್ಣರಾಜಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಗ್ರಾಮಯಾತ್ರೆ ಹಾಗೂ ಸದ್ಭಕ್ತರ ಭೇಟಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಕಾಂಗ್ರೆಸ್ ನಾಯಕರಾದ ಬಿ.ಎಲ್ ದೇವರಾಜು, ಎಂ.ಡಿ. ಕೃಷ್ಣಮೂರ್ತಿ, ವಿಜಯ ರಾಮೇಗೌಡ, ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ, ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್. ಬಸವೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ತಾಲೂಕು ಮಹಿಳಾ ಒಕ್ಕಲಿಗರ ವೇದಿಕೆ ಅಧ್ಯಕ್ಷೆ ಪ್ರೇಮಕುಮಾರಿ ಸೇರಿದಂತೆ ನೂರಾರು ವಿವಿಧ ಸಮಾಜಗಳ ಮುಖಂಡರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ಮಂಡ್ಯ.

More Stories
ನೇಕಾರ ತೊಗಟವೀರ ಸಮಾಜದ 2026 ನೇ ಸಾಲಿನ ದಿನದರ್ಶಿಕೆ ಬಿಡುಗಡೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನವರಿ 10ರ ಶನಿವಾರ ವಿಜಯೋತ್ಸವ
ಹೃದಯಾಘಾತದಿಂದ ನಿಧನರಾದ ಕಾಂಗ್ರೆಸ್ ಕಾರ್ಯಕರ್ತ ಚೇತನಾ ಮಹೇಶ್ ಮನೆಗೆ ಸಚಿವ ಚೆಲುವಿನ ಸ್ವಾಮಿ ಭೇಟಿ