ಭಟ್ಕಳದಲ್ಲಿ ಲೈಫ್ ಕೇರ್ ಹಾಸ್ಪಿಟಲ್ ಹಾಗೂ ಶ್ರೀ ನಾಗಯಕ್ಷೆ ಚಾರಿಟಬಲ್ ಟ್ರಸ್ಟ್ಗಳ ಜಂಟಿ ಆಶ್ರಯದಲ್ಲಿ ಜನವರಿ 3ರಂದು ನಾಗಯಕ್ಷೆ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಆಡ್ಮಿನ್ ಹೆರಿಕ್ ಫರ್ನಾಂಡೀಸ್ ತಿಳಿಸಿದ್ದಾರೆ.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದ ಪರಿಣಾಮ ಇಂದು ಅನೇಕರು ಎಲುಬು–ಕೀಲು ನೋವು, ಮಧುಮೇಹ, ಉಸಿರಾಟದ ತೊಂದರೆ ಮತ್ತು ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಸಲಹೆ ನೀಡುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಶಿಬಿರದಲ್ಲಿ ಎಲುಬು ಹಾಗೂ ಕೀಲುಗಳ ತಜ್ಞ ಡಾ. ಎಂ.ಡಿ. ನವಾಬ್, ಜನರಲ್ ಫಿಜಿಷಿಯನ್ ಹಾಗೂ ಮಧುಮೇಹ ತಜ್ಞ ಡಾ. ಕೆನತ್ ಕ್ರಿಸ್ಟಿನ್, ದಂತ ಚಿಕಿತ್ಸಾ ತಜ್ಞೆ ಡಾ. ಶ್ರಾವ್ಯ ಆಚಾರ್ಯ ಮತ್ತು ಫಿಸಿಯೋಥೆರಪಿಸ್ಟ್ ಡಾ. ಅಜಯ ವರ್ಮಾ ಸೇವೆ ಸಲ್ಲಿಸಲಿದ್ದಾರೆ. ರೋಗಿಗಳ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಲು ಫೈಬ್ರೋಸ್ಕ್ಯಾನ್, ಬಿಎಂಡಿ (ಎಲುಬಿನ ಘನತೆ ಪರೀಕ್ಷೆ), ಸ್ಪೈರೊಮೆಟ್ರಿ ಸೇರಿದಂತೆ ಹಲವು ಆಧುನಿಕ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ಹಾರ್ಮೋನ್ ಸಮಸ್ಯೆಗಳ ಕುರಿತು ವಿಶೇಷ ಮಾಹಿತಿ ನೀಡಲಾಗುತ್ತದೆ. ಹಾರ್ಮೋನ್ ಅಸಮತೋಲನದಿಂದ ತೂಕದಲ್ಲಿ ಏರಿಳಿತ, ದೌರ್ಬಲ್ಯ, ಥೈರಾಯ್ಡ್ ಸಮಸ್ಯೆ, ಮಧುಮೇಹದ ತೀವ್ರತೆ, ಮಹಿಳೆಯರಲ್ಲಿ ಮಾಸಿಕ ಅಸಮರ್ಪಕತೆ ಹಾಗೂ ಪುರುಷರಲ್ಲಿ ಶಕ್ತಿಹೀನತೆ ಮೊದಲಾದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವೆಂದು ವೈದ್ಯರು ಸಲಹೆ ನೀಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಲೈಫ್ ಕೇರ್ ಹಾಸ್ಪಿಟಲ್‌ನ ಎಚ್.ಆರ್. ರಾಜಿಕಾ ಹಾಗೂ ಮ್ಯಾನೇಜರ್ ಸಲ್ಮಾನ್ ಸಾದಿಕ್ ಉಪಸ್ಥಿತರಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

More Stories
ವೆಂಕಟಾಪುರ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ: ಇಬ್ಬರು ಸಾವು
ಇಂಡೋ–ಟಿಬೆಟಿಯನ್ ಗಡಿಯಲ್ಲಿ ಭಟ್ಕಳದ ಯುವಕನ ಸೇವೆ
ನಿಚ್ಚಲಮಕ್ಕಿಯ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಜ.22ರಿಂದ 26ರವರೆಗೆ ಧಾರ್ಮಿಕ ಮಹೋತ್ಸವಗಳು