ಭಟ್ಕಳ: ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡವರು ಕೊನೆಗೆ ಅದೇ ಕಾನೂನಿನ ಬಲೆಗೆ ಸಿಕ್ಕಿದ್ದಾರೆ. 1996ರಲ್ಲಿ ದಾಖಲಾಗಿದ್ದ ಅಕ್ರಮ ಶಸ್ತ್ರಾಸ್ತ್ರ ಶಾಗಣೆ ಪ್ರಕರಣದಲ್ಲಿ ನ್ಯಾಯಾಲಯದ ವಾರೆಂಟ್ ಇದ್ದರೂ, ಸುಮಾರು 30 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಭಟ್ಕಳ ಶಹರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನ ಹೆಸರು ಮಹ್ಮದ್ ಜಾವೇದ (55). ತಂದೆ ಅಬ್ದುಲ್ ಹಮೀದ್ ಖಾಜೀಯಾ. ಮೂಲತಃ ಭಟ್ಕಳದ ಸುಲ್ತಾನ್ ಸ್ಟ್ರೀಟ್ ನಿವಾಸಿಯಾಗಿರುವ ಈತ, ಪ್ರಕರಣ ದಾಖಲಾಗಿದ ಬಳಿಕ ನ್ಯಾಯಾಲಯಕ್ಕೆ ಮುಖ ತೋರಿಸದೇ ಪರಾರಿಯಾಗಿದ್ದನು. ವರ್ಷಗಳ ಕಾಲ ಊರು, ರಾಜ್ಯ ಬದಲಾಯಿಸಿಕೊಂಡು ಬದುಕುತ್ತಿದ್ದ ಆರೋಪಿತನು ಇತ್ತೀಚೆಗೆ ಥಾನೆ ನಗರದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದನು ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ದೀರ್ಘಕಾಲ ಬಾಕಿ ಉಳಿದಿದ್ದ ಈ ವಾರೆಂಟ್ ಪ್ರಕರಣವನ್ನು ಕೈಗೆತ್ತಿಕೊಂಡ ಭಟ್ಕಳ ಶಹರ ಪೊಲೀಸರು, ನುರಿತ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿದರು. ಖಚಿತ ಗುಪ್ತಚರ ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ತಂಡವು ಮುಂಬೈಗೆ ತೆರಳಿ ಆರೋಪಿತನನ್ನು ವಶಕ್ಕೆ ಪಡೆದು ಭಟ್ಕಳಕ್ಕೆ ಕರೆತಂದಿತು.
ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಂತರ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆ ಜಿಲ್ಲಾ ವರಿಷ್ಠಾಧಿಕಾರಿ ದೀಪನ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿಗಳಾದ ಎಂ. ಕೃಷ್ಣಮೂರ್ತಿ ಹಾಗೂ ಜಗದೀಶ ಎಂ., ಡಿವೈಎಸ್ಪಿ ಮಹೇಶ್ ಎಂ., ಸಿಪಿಐ ದಿವಾಕರ ಪಿ.ಎಂ. ಅವರ ಮೇಲ್ವಿಚಾರಣೆಯಲ್ಲಿ, ಪಿಎಸ್ಐ ನವೀನ್ ಎಸ್. ನಾಯ್ಕ ಅವರ ನೇತೃತ್ವದಲ್ಲಿ ನಡೆಯಿತು. ಎಎಸ್‌ಐ ಅಂತೋನ್ ಫರ್ನಾಂಡಿಸ್, ಗಿರೀಶ ಅಂಕೋಲೆಕರ, ದೀಪಕ್ ಎಸ್. ನಾಯ್ಕ ಹಾಗೂ ಮಹಾಂತೇಶ ಹೀರೆಮಠ ಅವರು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೂರು ದಶಕಗಳ ನಂತರವಾದರೂ ಕಾನೂನಿನ ಕೈ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈ ಪ್ರಕರಣ ಮತ್ತೆ ಒತ್ತಿ ಹೇಳಿದ್ದು, ದೀರ್ಘಕಾಲ ಬಾಕಿಯಿದ್ದ ವಾರೆಂಟ್‌ಗೆ ತೆರೆ ಎಳೆದ ಭಟ್ಕಳ ಶಹರ ಪೊಲೀಸರ ಕಾರ್ಯಕ್ಕೆ ಪೊಲೀಸ್ ಇಲಾಖೆಯೊಳಗೆ ಮೆಚ್ಚುಗೆ ವ್ಯಕ್ತವಾಗಿದೆ.

More Stories
ಉಮೇಶ ಮುಂಡಳ್ಳಿ ಗೆ ಕೇರಳ ಕಾಸರಗೋಡು ಕನ್ನಡ ಭವನದ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ಪ್ರಧಾನ
ವೆಂಕಟಾಪುರ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ: ಇಬ್ಬರು ಸಾವು
ಇಂಡೋ–ಟಿಬೆಟಿಯನ್ ಗಡಿಯಲ್ಲಿ ಭಟ್ಕಳದ ಯುವಕನ ಸೇವೆ