ಕುಮಟಾ : ತಾಲ್ಲೂಕಿನ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾ ಪೀಠದಿಂದ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸುಧೀರ ನಾಯಕರಿಗೆ ಹಾಗೂ ಅಂಕೋಲಾ ತಾಲ್ಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜನಪ್ರಿಯ ಕ್ರಿಯಾಶೀಲ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿಯವರನ್ನು ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕುಮಟಾ ಡಯಟಿನಿಂದ ಕರ್ನಾಟಕ ಸಂಸ್ಕೃತ ಪರಿಷತ್ ಹಾಗೂ ತುಮಕೂರಿನ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಸಹಯೋಗದಿಂದ ಆಯೋಜಿಸಲಾದ ಜಿಲ್ಲಾಮಟ್ಟದ ಇಲಾಖಾ ಸಂಸ್ಕೃತ ಕಾರ್ಯಾಗಾರದಲ್ಲಿ ಗೌರವಿಸಲಾಯಿತು.
ಸೃಜನಶೀಲ ಪ್ರಯೋಗಗಳಿಂದ, ವಿದ್ಯಾರ್ಥಿ ವಿಜ್ಞಾನಿಗಳ ನಿರ್ಮಾಣದ ಮೂಲಕ ಹಾಗೂ ರಚನಾತ್ಮಕವಾದ ಶೈಕ್ಷಣಿಕ ಚಟುವಟಿಕೆಗಳಿಂದ ರಾಜ್ಯ ಪ್ರಶಸ್ತಿಗೆ ಭಾಜನರಾದ ಅಂಕೋಲಾದ ಕೇಣಿಯ ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಾಗಿರುವ ಸುಧೀರ ನಾಯಕರವರು ಪ್ರೌಢ ಶಾಲಾ ಮುಖ್ಯಾಧ್ಯಾಪಕರಾಗಿ ಬಡ್ತಿಗೊಂಡವರು.
ಅಂಕೋಲಾದ ಬೋಳೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿರುವ ಜಗದೀಶ ನಾಯಕ ಹೊಸ್ಕೇರಿಯವರು, ಕನ್ನಡ ಚಂದ್ರಮ ಉತ್ತರ ಕನ್ನಡದ ಅಧ್ಯಕ್ಷರಾಗಿ ಸಂಘಟನೆ ಮತ್ತು ಪ್ರಕಾಶನದ ಮೂಲಕ ನಾಡು ನುಡಿಗೆ ಸಲ್ಲಿಸಿದ ಸೇವೆಯು ಗಮನಾರ್ಹವಾಗಿದ್ದು, ಅಂಕೋಲಾ ತಾಲ್ಲೂಕಾ ಶಿಕ್ಷಕರ ಸಂಘದ ನೊಗವನ್ನು ಹೊತ್ತಲ್ಲಿಂದ, ತನ್ನ ಕಾಲಾವಧಿಯಲ್ಲಿ ಶಿಕ್ಷಕರ ಗಟ್ಟಿ ಧ್ವನಿಯಾಗಿ ಅಭೂತಪೂರ್ವವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕ ವಲಯದಲ್ಲಿ ಅಪಾರವಾದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಉಭಯರನ್ನು ಸನ್ಮಾನಿಸಿದ ಸುಸಂದರ್ಭದಲ್ಲಿ ಡಯಟ್ ಪ್ರಾಚಾರ್ಯರಾದ ಎನ್. ಆರ್. ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯ ನಾಯ್ಕ, ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕರಾದ ರಾಜು ನಾಯ್ಕ ಹಾಗೂ ಕಾರ್ಯಾಗಾರದ ಪ್ರಧಾನ ರೂವಾರಿಗಳಾದ ಸಂಸ್ಕೃತ ಆಧ್ಯಾಪಕರಾದ ಮಂಜುನಾಥ ಗಾಂವಕರ್, ಬರ್ಗಿ ಮೊದಲಾದವರಿದ್ದರು.

More Stories
ಚಂದ್ರಶೇಖರ ಅಚ್ಯುತ ಗಾಂವಕರ ನಿಧನ
ವಿಶೇಷ ಚೇತನ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಹಿರೇಗುತ್ತಿಯ ಹೈಸ್ಕೂಲ್ ವಿದ್ಯಾರ್ಥಿನಿಗೆ ತೃತೀಯ ಸ್ಥಾನ
ಬರ್ಗಿಯ ನಾಗನೆಲೆಯಲ್ಲಿ ವಂದೇ ಮಹಾಲಿಂಗಶಿವಮನ್ನಣೆಗೆ ಪಂಡಿತ್- ಸಮೀರ್