ಭಟ್ಕಳ: ಬಡವರು, ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಇಂದಿರಾ ಕ್ಯಾಂಟಿನ್ ಯೋಜನೆಯ ಮೂಲಕ ರಾಜ್ಯದಾದ್ಯಂತ ಸುಮಾರು 6 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ತಾಲೂಕಿನ ಪಟ್ಟಣ ಪಂಚಾಯಿತಿ ಜಾಲಿ ವ್ಯಾಪ್ತಿಯ ಅಜಾದ್ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್ ಅನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿರಾ ಕ್ಯಾಂಟಿನ್‌ಗಳು ಹಸಿದವರ ಹಸಿವು ತಣಿಸುವುದರ ಜೊತೆಗೆ ಮಹಿಳೆಯರು ಹಾಗೂ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಾನವೀಯ ಯೋಜನೆಗಳಾಗಿವೆ ಎಂದರು. ಸರ್ಕಾರ ಘೋಷಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನೂ ಯಶಸ್ವಿಯಾಗಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸಚಿವರು ಸ್ವತಃ ಅಡುಗೆ ಬಡಿಸಿ ಸಾರ್ವಜನಿಕರಿಗೆ ಊಟ ವಿತರಿಸುವ ಮೂಲಕ ಕ್ಯಾಂಟಿನ್‌ಗೆ ಚಾಲನೆ ನೀಡಿದರು. ಬಳಿಕ ಕ್ಯಾಂಟಿನ್‌ನಲ್ಲಿ ತಯಾರಾದ ಆಹಾರವನ್ನು ಸ್ವತಃ ಸವಿದು ಅದರ ಗುಣಮಟ್ಟವನ್ನು ಪರಿಶೀಲಿಸಿದರು.
ಮನೆಗಳಿಗೆ ಪಹಣಿ ಪತ್ರ
ಪಟ್ಟಣದ ಹುರಳಿಸಾಲಿನಲ್ಲಿ ಹೌಸಿಂಗ್ ಸ್ಕೀಮ್ ಅಡಿಯಲ್ಲಿ 700 ಮನೆಗಳ ನಿರ್ಮಾಣ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಸಚಿವರು ಹೇಳಿದರು. ಸರ್ಕಾರದ ಜಾಗವನ್ನು ಹೌಸಿಂಗ್ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಯೋಜನೆ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಸಾಮಾನ್ಯ ಜನರಿಗೆ ಮನೆ ಸಿಗುವ ಉದ್ದೇಶದಿಂದಲೇ ಈ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಸರ್ಕಾರಿ ಪಡ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರು ಅಗತ್ಯ ದಾಖಲೆ ಸಲ್ಲಿಸಿದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಗುಂಟೆ ಹಾಗೂ ನಗರ ವ್ಯಾಪ್ತಿಯಲ್ಲಿ 2.5 ಗುಂಟೆ ಜಾಗದ ಪಹಣಿ ಪತ್ರವನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಫ್ಸಾ ಹುಜೈಸಾ, ಉಪಾಧ್ಯಕ್ಷ ಸೈಯದ್ ಇಮ್ರಾನ್ ಅಹ್ಮದ್ ಲಂಕಾ, ಈಶ್ವರ ಮೊಗೇರ, ಮುಖ್ಯಾಧಿಕಾರಿ ಎನ್. ಮಂಜಪ್ಪ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜು ನಾಯ್ಕ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಕೆ. ಎಸ್. ಕಮ್ಮಾರ, ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ನಾರಾಯಣ ನಾಯ್ಕ ನೆರವೇರಿಸಿದ್ದು, ಬಿಂದು ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು.

More Stories
ನಿವೃತ್ತ ಶಿಕ್ಷಕ ಐ.ಡಿ. ಖಾನ್ ನಿಧನ
ಸೊನಾರಕೇರಿಯಲ್ಲಿ ದೈವಜ್ಞ ಸಮಾಜದ ರಥೋತ್ಸವ ವೈಭವ
ಯಕ್ಷಗಾನ ಶ್ರೇಷ್ಠ ಪರಂಪರಾ ಕಲೆ – ಗಜು ಭಟ್ಟ ಖರ್ವಾ