ಹೊನ್ನಾವರ: ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ನಾಯ್ಕ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾಜಿ ರಾಜ್ಯಪಾಲೆ ಹಾಗೂ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಅವರ 84ನೇ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಶುಭಾಶಯ ಕೋರಿ ಅವರು ಮಾತನಾಡಿದರು.
ಕೆಪಿಸಿಸಿ ಸದಸ್ಯ ಎಂ.ಎನ್. ಸುಬ್ರಹ್ಮಣ್ಯ ಮಾತನಾಡಿ, ಅಂಬೇಡ್ಕರ್ ಅವರ ಜೀವನದಲ್ಲಿ ಎದುರಾದ ವೈವಿಧ್ಯಮಯ ಅನುಭವಗಳು ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿತು. ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನ ಸಮಿತಿ ಆಧುನಿಕ ಭಾರತದ ಪ್ರಗತಿಗೆ ದಿಕ್ಕುನೀಡಿದೆ ಎಂದು ಹೇಳಿದರು. ಮಾರ್ಗರೇಟ್ ಆಳ್ವ ಅವರು ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಮುತ್ಸದ್ದಿ ಆಡಳಿತಗಾರ್ತಿಯಾಗಿದ್ದು, ಸೇತುವೆಗಳ ನಿರ್ಮಾಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ವಿಸ್ತರಣೆಗೆ ಕಾರಣರಾದರು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಪ ತೆಂಗೇರಿ ಮಾತನಾಡಿ, ವೈವಿಧ್ಯತೆಯ ದೇಶವಾದ ಭಾರತದಲ್ಲಿ ಸಮಾನತೆಯ ಮೌಲ್ಯಗಳನ್ನು ಉಳಿಸುವಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಮಹತ್ವದ್ದಾಗಿದೆ ಎಂದು ಹೇಳಿದರು. ಮಾರ್ಗರೇಟ್ ಆಳ್ವ ಸಾಮಾನ್ಯ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪೌರ ಕಾರ್ಮಿಕರಾದ ಮಾರುತಿ ದುರ್ಗಾ ಹರಿಜನ ಹಾಗೂ ದೇವಿ ಗಣಪತಿ ಹರಿಜನ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಪ.ಪಂ ಸದಸ್ಯ ಸುರೇಶ್ ಮೇಸ್ತ, ಮುಖಂಡರಾದ ಕೃಷ್ಣ ಹರಿಜನ ಹಾಗೂ ಸಂದೀಪ ಪೂಜಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀರಾಮ ಜಾದುಗಾರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವೇದಿಕೆಯಲ್ಲಿ ಕೆಡಿಪಿ ಸದಸ್ಯ ವಿಶಾಲ ಭಟ್, ಕೃಷ್ಣ ಮಾರಿಮನೆ, ಕೇಶವ ಮೇಸ್ತ, ಜ್ಯೋತಿ ಮಹಾಲೆ, ಹನೀಫ್, ಕೆ.ಎಚ್. ಗೌಡ, ಮೋಹನ ಆಚಾರಿ, ಸುರೇಶ್ ರುಕ್ಕು ಮೇಸ್ತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಮಾರ್ಗರೇಟ್ ಆಳ್ವ ಅವರ ಜನ್ಮದಿನದ ಅಂಗವಾಗಿ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ. ರಾಜೇಶ್ ಕಿಣಿ ಉಪಸ್ಥಿತರಿದ್ದರು.

More Stories
ಹೊನ್ನಾವರದಲ್ಲಿ ಸೂಪರ್ ಮಾರ್ಕೆಟ್ ಕಳ್ಳತನ: 48 ಗಂಟೆಯಲ್ಲೇ ಆರೋಪಿತ ಬಂಧನ
ಗುಣವಂತೆಯಲ್ಲಿ ಶ್ರೀ ಶಂಭುಲಿಂಗೇಶ್ವರ ದೇವಾಲಯ ಲೋಕಾರ್ಪಣೆ: ಹತ್ತು ದಿನಗಳ ವೈಭವೋತ್ಸವಕ್ಕೆ ಭವ್ಯ ಸಮಾರೋಪ
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ