ಹೊನ್ನಾವರ: ಪಟ್ಟಣ ಪಂಚಾಯತ್ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಪ.ಪಂ. ಮುಖ್ಯಾಧಿಕಾರಿ ಏಸು ಬೆಂಗಳೂರು ಮಾತನಾಡಿ, ಲಿಂಗ ಸಮಾನತೆಯ ಹೋರಾಟದಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಆ ಕಾಲದಲ್ಲೇ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ ಅವರು, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು. ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೇ ಅವರ ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಪಲ್ಲವಿ ಮುಕ್ರಿ, ಮೇಘಾ ವಾಗ್ಮೆರಿ, ರಾಘವ ಮುಕ್ರಿ, ಸಂಶೋಧಕ ಸಿ.ಪಿ. ಶಿವಚಂದ್ರ ಹಾಗೂ ಪೌರ ಕಾರ್ಮಿಕರಾದ ಪ್ರಭಾಕರ ಹರಿಜನ, ಮೇಘನಾಥ ಹರಿಜನ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಪ್ರೋ. ವಿಶಾಲ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಸಾಧನೆ ಹಾಗೂ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಪ್ರವೀಣ ಕರಾಂಡೆ ಮಾತನಾಡಿ, ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನವು ಮಹಾನ್ ಗ್ರಂಥವಾಗಿದ್ದು, ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಜಾತಿ ಅಸಮಾನತೆ ಮತ್ತು ಅಸ್ಪೃಶ್ಯತೆ ನಿವಾರಣೆಗೆ ಅವರು ನಡೆಸಿದ ಹೋರಾಟವನ್ನು ಸ್ಮರಿಸಿದರು. ಕಾರ್ಯಕ್ರಮಕ್ಕೆ ಕೆಲ ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದು ಅಂಬೇಡ್ಕರ್ ಅವರಿಗೆ ಅವಮಾನವಾದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವೇದಿಕೆಯಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅಣ್ಣಪ್ಪ ಮುಕ್ರಿ, ಸಿಡಿಪಿಒ ವನಿತಾ ದೇಶಭಂಡಾರಿ, ಬಿಇಓ ಜಯಶ್ರೀ ನಾಯ್ಕ, ಕರವೇ ಅಧ್ಯಕ್ಷ ಮಂಜುನಾಥ್ ಗೌಡ, ಮುಕ್ರಿ ಸಮಾಜದ ಜಿಲ್ಲಾಧ್ಯಕ್ಷೆ ಮಂಜಳಾ ಮುಕ್ರಿ, ಹೊನ್ನಾವರ ಉಳಿಸಿ ಬೆಳೆಸಿ ಸಂಘದ ಅಧ್ಯಕ್ಷ ಜಿ.ಎನ್. ಗೌಡ, ಡಾ. ಜಿ.ಪಿ. ಪಾಠಣಕರ, ಎಂ.ಜಿ. ಹೆಗಡೆ, ಜಿ.ಟಿ. ಹಳ್ಳೇರ, ರವಿ ಮುಕ್ರಿ, ಪತ್ರಕರ್ತ ಎಂ.ಜಿ. ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸುಮಂಗಲಾ ಭಟ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಜಿ. ಸತೀಶ ವಂದಿಸಿದರು. ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ