April 17, 2026

ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ

ಗುಣವಂತೆ.ಹೊನ್ನಾವರ :  ಅಷ್ಟಬಂಧ, ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಈ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಶ್ರೀ ದೇವರಿಗೆ ಕಲಶಾಭಿಷೇಕ ಮಾಡಿ ಆಶೀರ್ವಚನ ನೀಡಿದರು.


ಪಂಚ ಕ್ಷೇತ್ರಗಳಲ್ಲಿ ಒಂದಾದ ಗುಣವಂತೆ ವಾಮದೇವನಾಗಿದ್ದು, ಶ್ರೀ ಮುರ್ಡೇಶ್ವರ ನಿರ್ಮಾತೃ ಶ್ರೀ ಆರ್. ಎನ್. ಶೆಟ್ಟಿ ಸುಪುತ್ರ ಶ್ರೀ ಸುನಿಲ್ ಶೆಟ್ಟಿಯಿಂದ ನಿರ್ಮಾಣಗೊಂಡ ಈ ದೇವಾಲಯ ಅಘೋರದಿಂದ ವಾಮದೇವನಿಗೆ ಅರ್ಪಣೆಯಾದಂತಾಗಿದೆ.ತ್ರಿನೇತ್ರನಾದ ಶಿವ ತನ್ನ ಭಕ್ತರಿಗೆ ಸೋಮಲೋಚನದಿಂದ ತಂಪನ್ನು, ಸೂರ್ಯಲೋಚನದಿಂದ ಬೆಳಕನ್ನು, ಮತ್ತು ಅಗ್ನಿಲೋಚನದಿಂದ ಅಂತರ್ಯದಲ್ಲಿರುವ ದುಷ್ಟತನವನ್ನು ಕಳೆಯಬೇಕಾದರೆ ಭಕ್ತನಿಂದ ಅಪೇಕ್ಷಿತ ಭಾವದ ಬಗ್ಗೆ ತಿಳಿಸಿದರು. ಗುಣವಂತೆಯ ಶಿವನ ಸುಂದರ ಭಾವ ಈ ಭವ್ಯ ದೇವಾಲಯದಿಂದ ಪ್ರಕಟವಾದಂತೆ ಭಕ್ತರ ಭಾವವು ಜಾಗ್ರತವಾಗಲಿ ತನ್ಮೂಲಕ ಈ ಆವರಣ ಸದಾ ಶಾಂತಿ, ಸಮಾಧಾನ ಮತ್ತು ತೃಪ್ತಿ ಲಭಿಸಲಿ ಎಂದು ಆಶೀರ್ವಚನ ನೀಡಿದರು.


ಸಂಜೆ ನಡೆದ ಧರ್ಮ ಸಭೆಯಲ್ಲಿ ಶ್ರೇಷ್ಠ ನ್ಯಾಯಾಧೀಶರಾದ ಶ್ರೀ ವಿ. ಶ್ರೀಶಾನಂದರವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ದೇವಾಲಯದ ಅಷ್ಟಬಂಧ, ಕಲಶೋತ್ಸವ ಯಾಕೆ ಬೇಕು ಎಂಬ ಬಗ್ಗೆ ಭಾಗವತ, ಪುರಾಣ ಮತ್ತು ಹಲವು ದೃಷ್ಟಾಂತಗಳ ಉಲ್ಲೇಖ ಮಾಡುತ್ತಾ ಕಾರ್ಮಿಕ ಪ್ರವಚನ ನೀಡಿದರು. ಅಧ್ಯಕ್ಷತೆ ವಹಿಸಿದ ಬಾ. ನರಸಿಂಹ ಪಂಡಿತರವರು ಮಾತನಾಡುತ್ತಾ ದೇವಾಲಯದ ನಿರ್ಮಾಣದಿಂದ ಊರು ಬದಲಾವಣೆ ಕಂಡಿದೆ. ಈ ಬದಲಾವಣೆಯೊಂದಿಗೆ ಸರ್ವರೂ ಸರ್ವರೂ ಒಗ್ಗಟ್ಟಿನಿಂದ ಊರಿನಲ್ಲಿ ಸದ್ಭಾವನೆಯ ಬದಲಾವಣೆ ತರಬೇಕೆಂದು ಹೇಳಿದರು.

ಶಿಕ್ಷಕಿಯಾದ ಶ್ರೀಮತಿ ಮಹಾದೇವಿ ಗೌಡರು ಸ್ವರಚಿತ ಪ್ರಾರ್ಥನಾ ಗೀತೆಯೊಂದಿಗೆ ಶುಭಾರಂಭ ನೀಡಿದರು.ಶ್ರೀ ನಾರಾಯಣ ಯಾಜಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀ ಎಲ್.ಎಮ್. ಹೆಗಡೆ ವಂದಿಸಿದರು. ನಿವೃತ್ತ ಪ್ರಾಚಾರ್ಯರಾದ ಶ್ರೀ ಎಸ್. ಜಿ. ಭಟ್ಟರವರು ಕಾರ್ಯಕ್ರಮ ನಿರೂಪಿಸಿದರು.

About The Author

error: Content is protected !!