April 19, 2026

ಗುಣವಂತೆಯಲ್ಲಿ ಶ್ರೀ ಶಂಭುಲಿಂಗೇಶ್ವರ ದೇವಾಲಯ ಲೋಕಾರ್ಪಣೆ: ಹತ್ತು ದಿನಗಳ ವೈಭವೋತ್ಸವಕ್ಕೆ ಭವ್ಯ ಸಮಾರೋಪ


ಗುಣವಂತೆ: ಶ್ರೀ ಶಂಭುಲಿಂಗೇಶ್ವರ ದೇವರ ಶಿಲಾಮಯ ದೇವಾಲಯದ ಲೋಕಾರ್ಪಣೆ, ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ವೈಭವಕ್ಕೆ ಡಾ. ಆರ್. ಎನ್. ಶೆಟ್ಟಿ ವೇದಿಕೆಯಲ್ಲಿ ಭಾನುವಾರ ಭವ್ಯ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾರತವು ಒಂದು ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ವಿಶ್ವಗುರು ಆಗಿದ್ದನ್ನು ಸ್ಮರಿಸಿದರು.

ದೇವಾಲಯಗಳು ಆಧ್ಯಾತ್ಮಿಕ ಶಕ್ತಿಯೊಂದಿಗೆ ಆತ್ಮಶಕ್ತಿಯನ್ನು ಜಾಗೃತಗೊಳಿಸಿ ಸಮಾಜವನ್ನು ಶಕ್ತಿಶಾಲಿಯಾಗಿಸಲು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು. ತಮ್ಮ ಕ್ಷೇತ್ರದಲ್ಲಿರುವ ಪಂಚ ಕ್ಷೇತ್ರಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ಗುಣವಂತೆಯ ದೇವಾಲಯದ ಲೋಕಾರ್ಪಣೆ ಈ ಅಭಿವೃದ್ಧಿಗೆ ನೆರವಾಗಲಿ ಎಂದು ಆಶಿಸಿದರು. ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಹೆಚ್ಚಿನ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.


ಇನ್ನೋರ್ವ ಮುಖ್ಯ ಅತಿಥಿ ಮಾಜಿ ಶಾಸಕ ಶ್ರೀ ಸುನಿಲ್ ನಾಯ್ಕ ಮಾತನಾಡಿ, ತಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಈ ದೇವಾಲಯದ ಅಭಿವೃದ್ಧಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈಗಾಗಲೇ ಸಭಾದ್ವಾರ ಮಂಟಪ ನಿರ್ಮಾಣಕ್ಕೆ ಅವಕಾಶ ನೀಡಿದ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಿತಿಯ ಸದಸ್ಯರಾದ ಶ್ರೀ ಎಸ್. ಎಚ್. ಗೌಡ ಹತ್ತು ದಿನಗಳ ಕಾರ್ಯಕ್ರಮದ ಅವಲೋಕನವನ್ನು ಮಂಡಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಸಮಿತಿಯ ಅಧ್ಯಕ್ಷ ಡಾ. ನರಸಿಂಹಮೂರ್ತಿ ಪಂಡಿತ್ ಮಾತನಾಡಿ, ಈ ಅಪೂರ್ವ ಸಮಾರಂಭದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ, ಗ್ರಾಮಾಭಿವೃದ್ಧಿಗೆ ದೇವಾಲಯಗಳ ಪುನರುತ್ಥಾನ ಅತ್ಯಂತ ಮುಖ್ಯವೆಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲೂ ಊರಿನ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.


ಕಾರ್ಯಕ್ರಮದ ಆರಂಭದಲ್ಲಿ ನಿವೃತ್ತ ಪ್ರಾದೇಶಿಕ ಪರಿಸರ ಅಧಿಕಾರಿ ಶ್ರೀಮತಿ ವಿಜಯ ಪಂಡಿತ್ ಅವರು ಡಾ. ನರಸಿಂಹಮೂರ್ತಿ ಪಂಡಿತ್ ರಚಿಸಿದ ಭೂಕೈಲಾಸ ಪ್ರಾರ್ಥನೆಯನ್ನು ಗಾಯನ ಮಾಡಿ ಸಮಾರಂಭಕ್ಕೆ ಶುಭಾರಂಭ ನೀಡಿದರು. ಸಂಗೀತ ಸಾಥ್ ಅನ್ನು ಶ್ರೀ ಅನಂತಮೂರ್ತಿ (ತಬಲಾ) ಹಾಗೂ ಶ್ರೀ ಸೂರ್ಯನಾರಾಯಣ ಭಟ್ಟ ಸೂರಿ (ಹಾರ್ಮೋನಿಯಂ) ನೀಡಿದರು.


ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್. ಎಮ್. ಹೆಗಡೆ ಸ್ವಾಗತಿಸಿದರು. ಶ್ರೀ ಎಲ್. ಎಮ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಶ್ರೀ ಶಿವಾನಂದ ಗೌಡ ವಂದಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸ್ಥಳೀಯ ರಂಗಕರ್ಮಿಗಳಿಂದ ನಾಟಕ ಪ್ರದರ್ಶನ ಹಾಗೂ ನಂತರ ಯಕ್ಷಗಾನ ಪ್ರದರ್ಶನ ನಡೆಯಿತು. ಯಕ್ಷಗಾನ ಕಲಾವಿದರ ಅದ್ಭುತ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

About The Author

error: Content is protected !!