ವಿಜಯಪುರ: ಜಿಲ್ಲಾ ಕುರುಬ ಸಮಾಜದ ವತಿಯಿಂದ ಲೋಕಮಾತಾ ಅಹಲ್ಯಾದೇವಿ ಹೋಳ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಣ, ವೈಯಕ್ತಿಕ ಸಾಧನೆ ಮತ್ತು ಸಮಾಜಮುಖಿ ಮೌಲ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪ್ರತಿಭಾ ಪುರಸ್ಕಾರ’ ಸಮಾರಂಭವನ್ನು ಗಣ್ಯರು ಜಂಟಿಯಾಗಿ ಉದ್ಘಾಟಿಸಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಹಾಗೂ ಶಾಸಕರಾದ ಉಮೇಶ್ ಮೇಟಿ ಅವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರರಾದ ಮಡಿವಾಳಪ್ಪ ಕರಡಿ, ಪ್ರಮುಖ ಮುಖಂಡರುಗಳಾದ ಚಂದ್ರಶೇಖರ ನೂಗಲಿ, ಜಿ.ಬಿ. ವಿನಯಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ಸ್ಥಳದಲ್ಲೇ ನೊಂದ ಮಹಿಳೆಯ ಅಹವಾಲು ಆಲಿಸಿದ ಅಧ್ಯಕ್ಷರು:
ಇದೇ ಕಾರ್ಯಕ್ರಮದ ಧಾವಂತದ ನಡುವೆಯೂ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ನಿವಾಸಿಯಾದ ಶ್ರೀಮತಿ ಲಕ್ಷ್ಮೀಬಾಯಿ ಪರಶುರಾಮ ಬಂಢಾರೆ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರನ್ನು ಖುದ್ದಾಗಿ ಭೇಟಿಯಾದರು. ತಮ್ಮ ಜೀವನದ ಕಷ್ಟ ಹಾಗೂ ದೀರ್ಘಕಾಲದ ಸಮಸ್ಯೆಯ ಕುರಿತು ಸುದೀರ್ಘವಾಗಿ ಚರ್ಚಿಸಿದ ಲಕ್ಷ್ಮೀಬಾಯಿ ಅವರು, ತಮಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿ ಅಧ್ಯಕ್ಷರಿಗೆ ಲಿಖಿತ ಮನವಿ ಪತ್ರವನ್ನು ಸಲ್ಲಿಸಿದರು.
ತ್ವರಿತ ಕ್ರಮದ ಭರವಸೆ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ:
ಮಹಿಳೆಯ ಅಳಲನ್ನು ಅತ್ಯಂತ ತಾಳ್ಮೆ ಮತ್ತು ಕರುಣೆಯಿಂದ ಆಲಿಸಿ ಮನವಿಯನ್ನು ಸ್ವೀಕರಿಸಿದ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದರು. “ಶ್ರೀಮತಿ ಲಕ್ಷ್ಮೀಬಾಯಿ ಅವರೇ, ಧೈರ್ಯವಾಗಿರಿ. ನೀವು ಸಲ್ಲಿಸಿರುವ ಮನವಿಯನ್ನು ಆಯೋಗವು ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ. ನಿಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ತಕ್ಷಣವೇ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು” ಎಂದು ಸ್ಥಳದಲ್ಲೇ ಭರವಸೆ ನೀಡಿ ಆಕೆಗೆ ಧೈರ್ಯ ತುಂಬಿದರು.
ನಗರಾಭಿವೃದ್ಧಿ ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲೇ ಮಹಿಳಾ ಆಯೋಗದ ಅಧ್ಯಕ್ಷರು ತೋರಿದ ಈ ತ್ವರಿತ ಮತ್ತು ಮಾನವೀಯ ನಡೆಗೆ ಕಾರ್ಯಕ್ರಮದಲ್ಲಿದ್ದ ಸಾರ್ವಜನಿಕ ವಲಯ ಹಾಗೂ ಮುಖಂಡರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ವರದಿ : ಮಹೇಶ ಶರ್ಮಾ

More Stories
ಶಾಸಕ ರಾಜು ಕಾಗೆ ಅವರಿಗೆ ಭವ್ಯ ಸನ್ಮಾನ; ಮದಭಾವಿಗೆ ಪ್ರೌಢಶಾಲೆ ಹಾಗೂ ಗ್ರಾಮೀಣ ಬಸ್ ಸೌಕರ್ಯಕ್ಕೆ ಆಗ್ರಹಿಸಿ ಮನವಿ
ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಭವ್ಯ ಸನ್ಮಾನ; ಮದಭಾವಿ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚಿದ ಒತ್ತಾಯ
ಬೈಲಹೊಂಗಲ ತಾಲೂಕಿನಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಮೂರ್ತಿಗಳ ವಿತರಣೆ