July 15, 2026

ಮದಭಾವಿ ಸರ್ಕಾರಿ ಶಾಲೆಯಲ್ಲಿ ನೂತನ ವೇದಿಕೆ ನಿರ್ಮಾಣಕ್ಕೆ ಚಾಲನೆ: ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ

ಅಥಣಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಭೌತಿಕ ವಿಕಸನಕ್ಕೆ ಶಾಲೆಯಲ್ಲಿ ಉತ್ತಮ ವೇದಿಕೆಯ ಅಗತ್ಯವಿದ್ದು, ಇದೀಗ ನೂತನ ರಂಗಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿರುವುದು ಶ್ಲಾಘನೀಯ ಎಂದು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ ಅಭಿಪ್ರಾಯಪಟ್ಟರು.


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಡಿಎಂಸಿ (SDMC) ಸಭೆ, ನೂತನ ಕಾರ್ಯಕ್ರಮ ವೇದಿಕೆ ನಿರ್ಮಾಣದ ಗುದ್ದಲಿ ಪೂಜೆ, ಶಿಕ್ಷಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಡಿ ನಿರ್ಮಾಣವಾಗಲಿರುವ ಈ ನೂತನ ವೇದಿಕೆಯು ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ಅವಕಾಶ ಕಲ್ಪಿಸಲಿದೆ ಎಂದ ಅವರು, ಬಡ ಮಕ್ಕಳ ಹಿತದೃಷ್ಟಿಯಿಂದ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆಯ ಅವಶ್ಯಕತೆ ಇರುವುದರಿಂದ ಈ ಬಗ್ಗೆ ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.


ಶಿಕ್ಷಕರ ಸೇವೆ ಅನನ್ಯ:
ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವ ಶಿಕ್ಷಕರ ಸೇವೆ ಅನನ್ಯವಾದುದು. ಶಾಲೆಯ ಶಿಸ್ತು ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ಬಂದಿರುವ ಶಿಕ್ಷಕರನ್ನು ಹಾಗೂ ಶಾಲೆಯ ಅಡುಗೆ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದ್ದು ಅತ್ಯಂತ ಸಂತೋಷದ ಸಂಗತಿ ಎಂದ ಪ್ರವೀಣ ನಾಯಿಕ ಅವರು, ಆಟೋಟ ಸ್ಪರ್ಧೆಗಳಲ್ಲಿ ಗೆದ್ದ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಸದಾ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಮಕ್ಕಳನ್ನು ಹುರಿದುಂಬಿಸಿದರು. ಇದೇ ವೇಳೆ ವೇದಿಕೆಯಲ್ಲಿದ್ದ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಿದರು.


ಶಾಲೆ ಹಾಗೂ ಮಕ್ಕಳ ಅಭಿವೃದ್ಧಿಯೇ ನಮ್ಮ ಗುರಿ:
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಲೆಯ ಪ್ರಧಾನ ಗುರುಗಳಾದ ಎಸ್. ಎ. ಚೌಗಲಾ ಅವರು ಮಾತನಾಡಿ, “ನಮ್ಮ ಶಾಲೆಯ ಅಭಿವೃದ್ಧಿಗೆ ಎಸ್‌ಡಿಎಂಸಿ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರ ಸಹಾಯ ಮತ್ತು ಸಹಕಾರ ನಿರಂತರವಾಗಿದೆ. ಶಾಲೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಯೇ ನಮ್ಮ ಮುಖ್ಯ ಗುರಿಯಾಗಿದೆ,” ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಡೆದ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (SDMC) ಸಭೆಯಲ್ಲಿ ಶಾಲೆಯ ಮುಂದಿನ ಶೈಕ್ಷಣಿಕ ಪ್ರಗತಿ ಹಾಗೂ ಮೂಲಸೌಕರ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ರಮೇಶ ಕಾಂಬಳೆ ವಹಿಸಿದ್ದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷರಾದ ರೇಖಾ ಮಡಿವಾಳ, ಸದಸ್ಯರಾದ ಮಲ್ಲೇಶ ಖಟಾವಿ, ನಾಗರಾಜ ಹಡಪದ, ಸಂಗೀತಾ ಮಗದುಮ್ಮ, ರುಕ್ಷಾನ ಅಲಾಸ, ಅಶ್ವಿನಿ ಗಾರಿಮನಿ, ಶಾಂತಾ ಕಾಂಬಳೆ, ಸುನಿತಾ ನಾಯಕ, ಸುಮಿತ್ರಾ ಬೀಸೆ, ಸುವರ್ಣಾ ನಿರ್ಲೇಕರ ಉಪಸ್ಥಿತರಿದ್ದರು.
ಹಾಗೂ ಶಿಕ್ಷಕ ವೃಂದದ ಎಸ್. ಎನ್. ಮಾಕನವರ, ಕೆ. ಎಸ್. ನಾಯ್ಕೋಡಿ, ಪಿ. ಎಸ್. ಪಕೀರೆ, ವಿ. ಬಿ. ಪಾಟೀಲ, ಆರ್. ಬಿ. ನಿಲಜಗಿ, ಎ. ಎಸ್. ಚೌಗಲಾ, ವಿ. ಎಂ. ಪೂಜಾರಿ ಸೇರಿದಂತೆ ಗ್ರಾಮದ ಮುಖಂಡರು, ಪಾಲಕರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.                ವರದಿ : ಮಹೇಶ ಶರ್ಮ

About The Author

error: Content is protected !!