ಅಳ್ಳಂಕಿ (,ಹೊನ್ನಾವರ): ಅಳ್ಳಂಕಿ ಕಾಲೇಜಿನಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಜಿ.ಎಸ್. ಹೆಗಡೆಯವರಿಗೆ ಆತ್ಮೀಯ ಅಭಿನಂದನೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದ ಸೂರಾಲು ಚಂದ್ರಶೇಖರ ಭಟ್ಟರು, ಡಾ. ಹೆಗಡೆಯವರ ದೀರ್ಘಕಾಲದ ಪ್ರಾಮಾಣಿಕ ಸೇವೆಯನ್ನು ಶ್ಲಾಘಿಸಿ, ಅವರು ನಂಬಿದ ಮುಖ್ಯಪ್ರಾಣ ಹಾಗೂ ಸದ್ಗುರುಗಳ ಕೃಪೆ ಸದಾ ಅವರ ಮೇಲೆ ಇರಲೆಂದು ಹಾರೈಸಿದರು.

ಹಿರಿಯರಾದ ಆರ್.ಎಸ್. ರಾಯ್ಕರ್ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಿದ್ದರೂ ಸರ್ಕಾರಿ ಕಾಲೇಜುಗಳಲ್ಲಿ ಇಷ್ಟೊಂದು ಶಿಸ್ತು ಮತ್ತು ಒಗ್ಗಟ್ಟು ಹೊಂದಿರುವ ಕಾಲೇಜನ್ನು ಕಂಡಿಲ್ಲ ಎಂದು ಹೇಳಿ, ಅದಕ್ಕೆ ಡಾ. ಜಿ.ಎಸ್. ಹೆಗಡೆಯವರ ಪರಿಶ್ರಮ ಮತ್ತು ವ್ಯಕ್ತಿತ್ವವೇ ಕಾರಣ ಎಂದರು.

ಉಪನಿರ್ದೇಶಕ ಸತೀಶ ನಾಯ್ಕ ಅವರು, ಡಾ. ಹೆಗಡೆಯವರು ದಕ್ಷ ಹಾಗೂ ಪ್ರಾಮಾಣಿಕ ಪ್ರಾಚಾರ್ಯರಾಗಿ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಪ್ರಾಚಾರ್ಯ ಎಸ್.ಎನ್. ಹೆಗಡೆಯವರು ತಮ್ಮ ಸೇವಾವಧಿಯಲ್ಲಿ ಡಾ. ಹೆಗಡೆಯವರು ನೀಡಿದ ಸಹಕಾರ ಮತ್ತು ಕ್ರಿಯಾಶೀಲತೆಯನ್ನು ಸ್ಮರಿಸಿದರು.

ಯಕ್ಷಗಾನ ಕಲಾವಿದ ವಿಷ್ಣು ಆಚಾರ್ಯ ಮಾತನಾಡಿ, “ಸತ್ಯ ಹೆಗಡೆಯವರ ಗುಂಡಬಾಳ ಮೇಳದಂತೆ, ಜಿ.ಎಸ್. ಹೆಗಡೆಯವರು ಅಳ್ಳಂಕಿ ಕಾಲೇಜು ಎಂಬ ಮೇಳವನ್ನು ಯಶಸ್ವಿಯಾಗಿ ಕಟ್ಟಿದ್ದಾರೆ” ಎಂದು ಪ್ರಶಂಸಿಸಿದರು. ಡಾ. ಗಜಾನನ ನಾಯ್ಕ ಅಭಿನಂದನಾ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಡಾ. ಹೆಗಡೆಯವರ ಪೂರ್ವ ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಪಂಚಾಯತ್ ಪ್ರತಿನಿಧಿಗಳು ಹಾಗೂ ಊರಿನ ಗಣ್ಯರು ನುಡಿ ಗೌರವ ಸಲ್ಲಿಸಿ, ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
ಸಂಜೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಹೆಬ್ಬಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸಣ್ಣ ಸಣ್ಣ ಕೆಲಸಗಳು ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಕೊಚರೇಕರ, ಅಳ್ಳಂಕಿಯಲ್ಲಿ ಕಾಲೇಜಿನ ಕನಸು ನನಸಾಗಿ ಇಂದು ಈ ಹಂತಕ್ಕೆ ಬೆಳೆದಿರುವುದು ಸಂತಸದ ವಿಷಯವಾಗಿದ್ದು, ನಿಸ್ವಾರ್ಥ ಸೇವೆ ಸಲ್ಲಿಸಿದ ಡಾ. ಜಿ.ಎಸ್. ಹೆಗಡೆಯವರ ಮಾರ್ಗದರ್ಶನ ಮುಂದೆಯೂ ಕಾಲೇಜಿಗೆ ಅಗತ್ಯವಿದೆ ಎಂದು ಹೇಳಿದರು.
ಪ್ರಾಚಾರ್ಯ ಕಿಶೋರ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿದಾಸ ಕುಮಟಾಕರ ವಂದಿಸಿದರು. ಮಹೇಶ ಹೆಗಡೆ ಹಾಗೂ ಸುಬ್ರಹ್ಮಣ್ಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
About The Author


More Stories
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ
ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರ ಎನ್. ಶೆಟ್ಟಿ ನಿಧನ