June 15, 2026

ರಸಗೊಬ್ಬರ, ಬಿತ್ತನೆ ಬೀಜ ಕೊರತೆ ಹಾಗೂ ಕಾಳಸಂತೆ ತಡೆಗೆ ಆಗ್ರಹ: ಕೃಷಿ ಅಧಿಕಾರಿಗೆ ಜಂಟಿ ಮನವಿ

ಅಥಣಿ: ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಚಟುವಟಿಕೆಗಳಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ತುರ್ತು ಅಗತ್ಯವಿದ್ದು, ತಾಲೂಕಿನ ಯಾವುದೇ ಹಳ್ಳಿಗಳ ಮಾರುಕಟ್ಟೆಯಲ್ಲಿ ಇವುಗಳ ಕೊರತೆ ಉಂಟಾಗದಂತೆ ಹಾಗೂ ರೈತರಿಗೆ ತೊಂದರೆಯಾಗದಂತೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಾಮಾಜಿಕ ಹೋರಾಟಗಾರರಾದ ಪ್ರವೀಣ ನಾಯಿಕ ಒತ್ತಾಯಿಸಿದ್ದಾರೆ.


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಿಂಗಣ್ಣ ಬಿರಾದಾರ ಅವರಿಗೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ವತಿಯಿಂದ ಜಂಟಿಯಾಗಿ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಸಕಾಲದಲ್ಲಿ ಗುಣಮಟ್ಟದ ಪೂರೈಕೆಗೆ ಒತ್ತಾಯ

ಎಲ್ಲಾ ಹಳ್ಳಿಗಳ ಪ್ರದೇಶದ ರೈತರಿಗೆ ಸಕಾಲದಲ್ಲಿ ಮತ್ತು ಸಮರ್ಪಕ ಪ್ರಮಾಣದಲ್ಲಿ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸರ್ಕಾರಿ ಸಹಾಯಧನದಡಿ ಪೂರೈಸಬೇಕು. ಕೆಲವು ಖಾಸಗಿ ಅಂಗಡಿಗಳಲ್ಲಿ ಸರ್ಕಾರದ ನಿಗದಿ ದರಕ್ಕಿಂತ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಮತ್ತು ಕಳಪೆ ಬೀಜ, ರಸಗೊಬ್ಬರ ವಿತರಿಸಲಾಗುತ್ತಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ನಿಯೋಗವು ಆಗ್ರಹಿಸಿತು.

ಯೂರಿಯಾ ಲಿಂಕಿಂಗ್ ದಂದೆಗೆ ಆಕ್ರೋಶ

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಉತ್ತರ ಕರ್ನಾಟಕ ಗೌರವಾಧ್ಯಕ್ಷ ರಮೇಶ ಮಡಿವಾಳ ಅವರು, “ಸರ್ಕಾರ ನಿಗದಿಪಡಿಸಿದ ಯೂರಿಯಾ ದರ ₹266 ಇದೆ. ಆದರೆ ಅಂಗಡಿ ಮಾಲೀಕರು ತಮ್ಮ ಮನಸ್ಸಿಗೆ ಬಂದಂತೆ ದರ ನಿಗದಿ ಮಾಡಿ ಮುಗ್ಧ ರೈತರಿಗೆ ಮೋಸ ಮಾಡುತ್ತಿದ್ದಾರೆ. ಗೋಡೌನ್‌ಗಳಲ್ಲಿ ರಸಗೊಬ್ಬರ ದಾಸ್ತಾನಿದ್ದರೂ ಸಹ ಖಾಲಿಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅಲ್ಲದೆ, ಬೇರೆ ಅನಗತ್ಯ ಕೃಷಿ ಉತ್ಪನ್ನಗಳನ್ನು (ಲಿಂಕ್) ಖರೀದಿಸಿದರೆ ಮಾತ್ರ ಗೊಬ್ಬರ ಕೊಡುವುದಾಗಿ ರೈತರಿಗೆ ಕಡ್ಡಾಯ ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ಆದೇಶ ಇಲ್ಲದಿದ್ದರೂ ನಡೆಯುತ್ತಿರುವ ಈ ದಂದೆಗೆ ಕೃಷಿ ಇಲಾಖೆ ತಕ್ಷಣ ಕಡಿವಾಣ ಹಾಕಬೇಕು” ಎಂದು ಕಿಡಿಕಾರಿದರು.

ಕಡ್ಡಾಯ ಲಿಂಕಿಂಗ್ ಮಾಡಿದರೆ ಕಠಿಣ ಕ್ರಮ: ಸಹಾಯಕ ನಿರ್ದೇಶಕ

ಮನವಿ ಸ್ವೀಕರಿಸಿ ಮಾತನಾಡಿದ ಅಥಣಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಿಂಗಣ್ಣ ಬಿರಾದಾರ ಅವರು, ರೈತರು ರಸಗೊಬ್ಬರದ ಜೊತೆ ಯಾವುದೇ ರೀತಿಯ ಲಿಂಕ್ ಉತ್ಪನ್ನಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಿಲ್ಲ. ಖಾಸಗಿ ವ್ಯಾಪಾರಿಗಳು ಯಾರಾದರೂ ಲಿಂಕ್ ಖರೀದಿಗೆ ಒತ್ತಾಯಿಸಿದರೆ ಅಥವಾ ಹೆಚ್ಚಿನ ದರ ವಸೂಲಿ ಮಾಡಿದರೆ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇಂತಹ ಪ್ರಕರಣಗಳು ಸಂಸ್ಥೆಯ ಅಥವಾ ರೈತರ ಗಮನಕ್ಕೆ ಬಂದರೆ ತಕ್ಷಣವೇ ಇಲಾಖೆಗೆ ತಿಳಿಸುವಂತೆ ಅವರು ಕೋರಿದರು.

ಪ್ರಮುಖರ ಉಪಸ್ಥಿತಿ

ಈ ಸಂದರ್ಭದಲ್ಲಿ ಪ್ರಮುಖರಾದ ಅನಿಲ ಭಾಮನೆ, ಕಿರಣ ಪಾಟೋಳೆ, ಶರಣಪ್ಪಾ ಶಿಂಧೆ, ಎಂ. ಶರ್ಮಾ, ಅಮೂಲ ಚವಾಣ, ಶಿವಾನಂದ ನಾವಿ, ಪ್ರಶಾಂತ ಶಿಂದೆ, ಸರಸ್ವತಿ ನೇಮಗೌಡ, ಕವಿತಾ ಭೋಸಲೆ, ಉಜ್ವಲ ಪಾಟೋಳೆ, ಶಿವಲೀಲಾ ಪಟ್ಟಣಶೆಟ್ಟಿ, ರೇಷ್ಮಾ ತೇಲಿ, ಅನ್ನಪೂರ್ಣ ಭಂಡಾರೆ, ರಮಜಾನ್ ಮುಲ್ಲಾ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


ದೇಶದ ಬೆನ್ನೆಲುಬಾಗಿರುವ ರೈತರು ಪ್ರತಿ ಹಂಗಾಮಿನಲ್ಲೂ ಇಂತಹ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವುದು ವಿಷಾದನೀಯ. ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೃಷಿ ಸಚಿವರು, ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಸಚಿವರು, ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಸೇರಿದಂತೆ ವ್ಯವಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಗಂಭೀರ ಸಮಸ್ಯೆಯನ್ನು ಆಲಿಸಿ, ರೈತರ ಸಂಕಷ್ಟಗಳಿಗೆ ಕೇವಲ ಭರವಸೆ ನೀಡದೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ಮಹೇಶ ಶರ್ಮ. ಬೆಳಗಾವಿ

About The Author

error: Content is protected !!