July 16, 2026

ಕಪ್ಪೆಚಿಪ್ಪು ಆರಿಸಲು ಹೋಗಿ ದುರಂತಕ್ಕೀಡಾದ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ಸಹಾಯಧನ ವಿತರಣೆ

ಭಟ್ಕಳ: ಶಿರಾಲಿಯ ತಟ್ಟಿಹಕ್ಕಲಿನಲ್ಲಿ ಕಪ್ಪೆಚಿಪ್ಪು ಆರಿಸಲು ಹೋಗಿ ದುರಂತಕ್ಕೀಡಾದ 11 ಜನರ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ವತಿಯಿಂದ ತಲಾ 50,000 ರೂಪಾಯಿಗಳ ಆರ್ಥಿಕ ಸಹಾಯಧನವನ್ನು ವಿತರಿಸಲಾಯಿತು.
ಮೃತರ ಪ್ರತಿಯೊಂದು ಮನೆಗೂ ಖುದ್ದಾಗಿ ಭೇಟಿ ನೀಡಿದ ಸಂಸ್ಥೆಯ ಪದಾಧಿಕಾರಿಗಳು, ಸಂತ್ರಸ್ತ ಕುಟುಂಬಗಳಿಗೆ ಧನಸಹಾಯ ಹಸ್ತಾಂತರಿಸಿ ಸಾಂತ್ವನ ಹೇಳಿದರು.

ಪೂಜ್ಯ ಹೆಗ್ಗಡೆಯವರ ಪ್ರಸಾದ ರೂಪದ ನೆರವು: ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ

ಸಹಾಯಧನ ವಿತರಣೆ ಮಾಡಿ ಮಾತನಾಡಿದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅವರು:

“ಈ ದುರಂತದಿಂದ ಕುಟುಂಬಗಳಿಗೆ ತೀವ್ರ ಹಾನಿಯಾಗಿದೆ. ಮೃತರ ಕುಟುಂಬಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಹಾಗೂ ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ. ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಸಾದ ರೂಪದಲ್ಲಿ ಈ ಹಣವನ್ನು ಕಳುಹಿಸಿಕೊಟ್ಟಿದ್ದು, ಎಲ್ಲಾ ಕುಟುಂಬಗಳಿಗೆ ತಲುಪಿಸುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದರು. ಅದರಂತೆ ಇಂದು ತಲುಪಿಸಿದ್ದೇವೆ. ಇದರಿಂದ ಕುಟುಂಬಗಳಿಗೆ ಸಹನಾ ಶಕ್ತಿ ಹೆಚ್ಚಲಿ ಮತ್ತು ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ,” ಎಂದು ಹಾರೈಸಿದರು.

ಪ್ರತಿಯೊಂದು ಮನೆಗೂ ತೆರಳಿದ ಪ್ರಾದೇಶಿಕ ನಿರ್ದೇಶಕರು ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿದರು. ಇದೇ ಸಂದರ್ಭದಲ್ಲಿ ದುರಂತದಿಂದ ಬದುಕುಳಿದವರ ಮನೆಗಳಿಗೂ ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಅವರಿಗೆ ಧೈರ್ಯ ತುಂಬಿದರು.

ಈ ಮಾನವೀಯ ಕಾರ್ಯಕ್ರಮದ ಸಂದರ್ಭದಲ್ಲಿ ಕೆಳಗಿನ ಗಣ್ಯರು ಉಪಸ್ಥಿತರಿದ್ದರು:

ನಾಗರತ್ನಾ ಹೆಗಡೆ – ಜಿಲ್ಲಾ ನಿರ್ದೇಶಕಿ

ಲತಾ ಬಂಗೇರ – ತಾಲೂಕಾ ಯೋಜನಾಧಿಕಾರಿ

ರವೀಂದ್ರ ನಾಯ್ಕ – ಒಕ್ಕೂಟದ ಅಧ್ಯಕ್ಷರು

ಜ್ಯೋತಿ ನಾಯ್ಕ – ಶೌರ್ಯ ವಿಪತ್ತು ನಿರ್ವಹಣಾ ತಂಡದ ಕ್ಯಾಪ್ಟನ್

ರಾಧಾಕೃಷ್ಣ ಭಟ್ಟ – ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯರು

ಪಲ್ಲವಿ – ವಲಯ ಮೇಲ್ವಿಚಾರಕಿ

ಸವಿತಾ – ಸೇವಾ ಪ್ರತಿನಿಧಿ

ಹಾಗೂ ಊರಿನ ಪ್ರಮುಖರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

About The Author

error: Content is protected !!