July 15, 2026

ಲಂಡನ್‌ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ

ಭಟ್ಕಳ: ತಾಲೂಕಿನ ಹೊನ್ನೆಗದ್ದೆಯ ಯುವಕ ಪ್ರಜ್ವಲ್ ಭಾಸ್ಕರ್ ನಾಯ್ಕ್ ಅವರು ಲಂಡನ್‌ನ ಪ್ರತಿಷ್ಠಿತ ‘ಸೌತ್ ಶೀಲ್ಡ್ಸ್ ಮೆರೈನ್ ಶಾಲೆ’ಯಲ್ಲಿ (South Shields Marine School) ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೋರ್ಸ್ ಅನ್ನು ಅತ್ಯುತ್ತಮವಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಸಂಸ್ಥೆಯ ಕ್ಯಾಪ್ಟನ್ ಜಾನ್ ಮಿಲ್ಲರ್ ಅವರು ಪ್ರಜ್ವಲ್ ಅವರಿಗೆ ಅಧಿಕೃತ ಪ್ರಮಾಣಪತ್ರವನ್ನು ಪ್ರದಾನ ಮಾಡಿ ಗೌರವಿಸಿದರು.

ಗ್ರಾಮೀಣ ಪ್ರತಿಭೆಯ ಜಾಗತಿಕ ಸಾಧನೆ:

ಪ್ರಜ್ವಲ್ ಅವರು ಹೊನ್ನೆಗದ್ದೆ-ಹೆಬ್ಬಳೆಯ ನಿವಾಸಿಗಳಾದ ಭಾಸ್ಕರ್ ನಾಯ್ಕ ಹಾಗೂ ಭವಾನಿ ಭಾಸ್ಕರ್ ನಾಯ್ಕ ದಂಪತಿಯ ಸುಪುತ್ರರಾಗಿದ್ದಾರೆ. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಶಿರಾಲಿಯ ಕೋಟೆಬಾಗಿಲ್‌ನ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪೂರೈಸಿದ್ದ ಇವರು, ದ್ವಿತೀಯ ಪಿಯುಸಿ ಮುಗಿದ ತಕ್ಷಣ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ್ದರು. ಅಲ್ಲಿ ಕಠಿಣ ಪರಿಶ್ರಮದಿಂದ ಸೌತ್ ಶೀಲ್ಡ್ಸ್ ಮೆರೈನ್ ಶಾಲೆಯಲ್ಲಿ ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್ ಕೋರ್ಸ್ ಮುಗಿಸಿ ತಾಯ್ನಾಡಿಗೆ ಕೀರ್ತಿ ತಂದಿದ್ದಾರೆ.

ಸರ್ವತ್ರ ಶ್ಲಾಘನೆ – ಅಭಿನಂದನೆಗಳ ಮಹಾಪೂರ:

ಸಾಗರ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ತರಬೇತಿ ಪಡೆದು ಸಾಧನೆ ಮಾಡಿರುವ ಪ್ರಜ್ವಲ್ ನಾಯ್ಕ ಅವರ ಈ ಯಶಸ್ಸಿಗೆ ಅವರ ಕುಟುಂಬದ ಸದಸ್ಯರು, ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಸಹಪಾಠಿಗಳು ಹಾಗೂ ಹಳೆಯ ವಿದ್ಯಾರ್ಥಿ ಸಂಘದವರು ಮತ್ತು ಹೊನ್ನೆಗದ್ದೆ ಭಾಗದ ಸಾರ್ವಜನಿಕರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಭಟ್ಕಳ ತಾಲೂಕಿಗೆ ಹೆಮ್ಮೆ ತಂದಿರುವ ಈ ಯುವ ಸಾಧಕನ ಮುಂದಿನ ವೃತ್ತಿಜೀವನ ಉಜ್ವಲವಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ.

About The Author

error: Content is protected !!